ಈಗ ಮಾವಿನ ಹಣ್ಣಿನ ಸೀಸನ್. ಮಾರುಕಟ್ಟೆಯಲ್ಲಿ ಕೆಜಿಗೆ ನೂರು ರೂಪಾಯಿಗೆ ರಸಭರಿತವಾದ ಮಾವಿನ ಹಣ್ಣುಗಳು ಸಿಗುತ್ತವೆ. ಇನ್ನು ವೆರೈಟಿ ತಳಿಯ ಮಾವಿನ ಹಣ್ಣಾದರೆ ಹೆಚ್ಚೆಂದರೆ ಬೆಲೆ ಕೆಜಿಗೆ 200-250 ರೂಪಾಯಿಯ ಒಳಗಿರಬಹುದು ಅಷ್ಟೆ. ಆದರೆ ಈ ಅಪರೂಪದ ಮಾವಿನ ಹಣ್ಣಿಗೆ ಪ್ರತಿ ಕೆಜಿಗೆ 2.7 ಲಕ್ಷ ರೂಪಾಯಿಯಂತೆ. ಅಚ್ಚರಿ ಎನಿಸಿದರೂ ಇದು ನಿಜ. ಜಪಾನ್ನಲ್ಲಿ ಹೆಚ್ಚಾಗಿ ಕಾಣಸಿಗುವ ಈ ಮಾವಿನಹಣ್ಣಿನ ಹೆಸರು, ಮಿಯಾಜಾಕಿ. ಇದು ವಿಶ್ವದಲ್ಲಿಯೇ ಅತಿ ದುಬಾರಿಯಾಗಿರುವ ಮಾವಿನ ಹಣ್ಣು. ಭಾರತದಲ್ಲಿ ಮಧ್ಯಪ್ರದೇಶದ ದಂಪತಿ ಈ ಹಣ್ಣನ್ನು ಬೆಳೆದಿದ್ದಾರೆ.
ಮಧ್ಯಪ್ರದೇಶದ ದಂಪತಿ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಓರ್ವ ವ್ಯಕ್ತಿ ಅವರಿಗಾಗಿ ಒಂದಿಷ್ಟು ಮಾವಿನ ಸಸಿಗಳನ್ನು ನೀಡಿದ್ದರು. ಇದನ್ನು ಮನೆಗೆ ತಂದ ದಂಪತಿ ತಮ್ಮ ತೋಟದಲ್ಲಿ ಸಸಿಯನ್ನು ಚೆನ್ನಾಗಿ ಬೆಳೆಸಿದ್ದಾರೆ. ಸಸಿ ಬೆಳೆದು ಮರವಾದಾಗ ಇದರ ಹಣ್ಣು ವಿಶಿಷ್ಟ ಬಣ್ಣದಲ್ಲಿರುವುದನ್ನು ಕಂಡು ಅವರು ಈ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ಇದು ವಿಶ್ಚದ ಕಾಸ್ಟ್ಲಿಯೆಸ್ಟ್ ಹಣ್ಣು ಎಂಬುದು ತಿಳಿದುಬಂದಿದೆ.
ಹಣ್ಣಿನ ಕಾವಲಿಗೆ 6 ನಾಯಿ, 4 ಮಂದಿ ಭದ್ರತಾ ಸಿಬ್ಬಂದಿ
ಜಪಾನೀಸ್ ಮಿಯಾಜಕಿ ಮಾವಿನ ಹಣ್ಣು ವಿಶ್ವದಲ್ಲಿಯೇ ಅತಿ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ. ಅಪರೂಪದಲ್ಲಿ ಅಪರೂಪವಾದ ಈ ಹಣ್ಣು ಕಳೆದ ವರ್ಷ ಪ್ರತಿ ಕೆಜಿಗೆ 2.7 ಲಕ್ಷ ರೂಪಾಯಿ ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಹೀಗಾಗಿಯೇ ದಂಪತಿ ಈ ಬೆಲೆಬಾಳುವ ಈ ಮಾವಿನ ಹಣ್ಣಿನ ಕಾವಲಿಗೆ 6 ನಾಯಿಗಳನ್ನು ಹಾಗೂ 4 ಜನ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದಾರೆ.
ಕಳೆದ ವರ್ಷ ಕಳ್ಳರು ಇವರ ಮಾವಿನ ತೋಟಕ್ಕೆ ನುಗ್ಗಿ ದುಬಾರಿ ಹಣ್ಣನ್ನು ಕದ್ದುಕೊಂಡು ಹೋಗಿದ್ದರು. ಹೀಗಾಗಿ ಈ ವರ್ಷ ದಂಪತಿ ಈ ವರ್ಷ ಮಾವಿನ ಹಣ್ಣನ್ನು ಕಳ್ಳರಿಂದ ಕಾಪಾಡಿಕೊಳ್ಳಲು ನಿರ್ಧರಿಸಿದ್ದಾರೆ. ಫೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಅಂಶದಿಂದ ಸಮೃದ್ಧಿಯಾಗಿರುವ ವಿಶೇಷ ಮಾವಿನ ಹಣ್ಣು ಇದಾಗಿದೆ. ಈ ಅಪರೂಪದ ಹಣ್ಣನ್ನು ಜಪಾನಿನಲ್ಲಿ ಮೊದಲು ಬೆಳೆದವರು ಮಿಯಾಜಾಕಿ ನಗರದವರು. ಹೀಗಾಗಿ ಈ ಮಾವಿನ ಹಣ್ಣಿಗೆ ಮಿಯಾಜಾಕಿ ಮ್ಯಾಂಗೋ ಎಂದು ಹೆಸರು ಬಂತು ಎಂದು ತಿಳಿದುಬಂದಿದೆ.