ಹೆಪಟೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಮಲಯಾಳಂ ನಿರ್ದೇಶಕ ಜೊಸೆಫ್ ಮನು ಜೇಮ್ಸ್ ಸಣ್ಣ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಹೆಪಟೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಜೊಸೆಫ್ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
31 ವರ್ಷ ವಯಸ್ಸಿನ ಜೊಸೆಫ್ ಮನು ಜೇಮ್ಸ್ ನಿರ್ದೇಶನದ ಮೊದಲ ಸಿನಿಮಾ ‘ನಾನ್ಸಿ ರಾಣಿ’ ಇನ್ನೇನು ಬಿಡುಗಡೆಯ ಹೊಸ್ತಿಲಿನಲ್ಲಿತ್ತು. ಆದರೆ ಅದಕ್ಕೂ ಮುನ್ನ ಜೊಸೆಫ್ ನಿಧನರಾಗಿದ್ದು ಜೊಸೆಫ್ ನಿಧನಕ್ಕೆ ಕುಟುಂಬದವರು, ಆಪ್ತರು ಹಾಗೂ ಸಿನಿಮಾ ತಂಡದವರು ಸಂತಾಪ ಸೂಚಿಸಿದ್ದಾರೆ.
ಜೊಸೆಫ್ ಮನು ಅವರಿಗೆ ನಿರ್ದೇಶಕನಾಗಬೇಕು ಎನ್ನುವ ಆಸೆ ಇತ್ತು. ಅವರ ಆಸೆ ಈಡೇರುವುದರಲ್ಲಿತ್ತು. ‘ನಾನ್ಸಿ ರಾಣಿ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಅರ್ಜುನ್ ಅಶೋಕನ್, ಶ್ರೀನಿವಾಸನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಅವರು ಮೃತಪಟ್ಟಿರುವುದು ಬೇಸರದ ವಿಚಾರ. ‘ನಾನ್ಸಿ ರಾಣಿ’ ಚಿತ್ರದಲ್ಲಿ ನಟಿಸಿರುವ ಅಜು ವರ್ಗೀಶ್ ಮೊದಲಾದವರು ಜೊಸೆಫ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಬೇಗ ತೆರಳಿದೆ ಸಹೋದರ. ಪ್ರಾರ್ಥನೆ’ ಎಂದು ವರ್ಗೀಶ್ ಬರೆದುಕೊಂಡಿದ್ದಾರೆ.
ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಜೊಸೆಫ್ ಮನು ಜೇಮ್ಸ್ ‘ಐ ಆ್ಯಮ್ ಕ್ಯೂರಿಯಸ್’ ಚಿತ್ರದಲ್ಲಿ ನಟಿಸಿದರು. ಸಬು ಜೇಮ್ಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮಲಯಾಳಂ, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದಾರೆ.