ವಾಣಿಜ್ಯ ಜಾಹಿರಾತು

ನವದೆಹಲಿ :  ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್‌ ಅಧ್ಯಕ್ಷರ ಚುನಾವಣೆಗೆ ತೆರೆಬಿದ್ದಿದೆ. ನಿರೀಕ್ಷೆಯಂತೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಎರಡು ದಶಕಗಳ ನಂತರ ಪಕ್ಷದ ಮುಖ್ಯಸ್ಥರಾಗಿರುವ ಮೊದಲ ಗಾಂಧಿಯೇತರ ನಾಯಕರಾಗಿದ್ದರೆ. ಒಟ್ಟು 9,385 ಮತಗಳ ಪೈಕಿ ಖರ್ಗೆಯವರು 7,897 ಮತಗಳನ್ನು ಗಳಿಸಿದ್ದಾರೆ. ತರೂರ್ ಅವರು ಸುಮಾರು 1000 ಮತಗಳನ್ನು ಪಡೆದರೆ 416 ಮತಗಳು ತಿರಸ್ಕೃತವಾಗಿವೆ.

ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ. ಜೊತೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಧನ್ಯವಾದ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. AICC ಚುನಾವಣೆ ಮುಗಿದ ಬಳಿಕ ದೆಹಲಿಯಲ್ಲಿ ಅವರು ಸುದ್ದಿಗೋಷ್ಠಿ ಮಾಡಿದರು. AICC ಅಧ್ಯಕ್ಷ ಸ್ಥಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ದೇಶಾದ್ಯಂತ ಪಕ್ಷವನ್ನು ಸಂಘಟಿಸಲು ಮತ್ತಷ್ಟು ಪ್ರಯತ್ನಿಸುವೆ. ಬೂತ್​ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತೆ. ಯುವ ನಾಯಕರು, ಹಿರಿಯ ನಾಯಕರ ಜತೆಗೂಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.

ಇಂದು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲಿ ಯಾರು ದೊಡ್ಡವರಲ್ಲ, ಯಾರು ಸಣ್ಣವರಲ್ಲ. ಕೋಮುವಾದದ ವಿರುದ್ಧ ಹೋರಾಡಬೇಕಿದೆ. ಸಂಘಟನೆಯನ್ನು ಬಲಿಷ್ಠ ಮಾಡಲಿದ್ದೇನೆ. ಸರ್ಕಾರದಲ್ಲಿರುವ ನಾಯಕರು ಮಾತು ಹೆಚ್ಚು ಮಾತನಾಡುತ್ತಾರೆ ಕೆಲಸ ಮಾಡಲ್ಲ ಎನ್ನಲಾಗುತ್ತಿದೆ. ಬಡ ಕುಟುಂಬದಲ್ಲಿ ಜನಿಸಿದ ನನಗೆ ಭರವಸೆ ಇಟ್ಟು ಆಯ್ಕೆ ಮಾಡಿದ್ದೀರಿ. ನಾನು ಆ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಖರ್ಗೆ ಅವರಿಗೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸ ಹೊಂದಿದ್ದ ಶಶಿ ತರೂರ್, ಫಲಿತಾಂಶ ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ “ನಮ್ಮ ಪಕ್ಷದ ಪುನಶ್ಚೇತನ ನಿಜಕ್ಕೂ ಇಂದು ಆರಂಭವಾಗಿದೆ” ಎಂದು ಹೇಳಿದ್ದಾರೆ. ಪಕ್ಷದ ನೂತನ ಚುನಾಯಿತ ಅಧ್ಯಕ್ಷ ಖರ್ಗೆ ಅವರನ್ನು ಅಭಿನಂದಿಸಿರುವ ತರೂರ್, “ಐಎನ್‌ಸಿಯ ಅಧ್ಯಕ್ಷರಾಗುವುದು ಮಹಾನ್ ಗೌರವ ಮತ್ತು ಭಾರಿ ಹೊಣೆಗಾರಿಕೆಯಾಗಲಿದೆ. ಆ ಕರ್ತವ್ಯದಲ್ಲಿ ಯಶಸ್ವಿಯಾಗಲಿ ಎಂದು ಖರ್ಗೆ ಅವರಿಗೆ ಹಾರೈಸುತ್ತೇನೆ. ಸಾವಿರಾರು ಸಹೋದ್ಯೋಗಿಗಳಿಂದ ಬೆಂಬಲ ಪಡೆದಿರುವುದು ಮತ್ತು ದೇಶಾದ್ಯಂತ ಕಾಂಗ್ರೆಸ್‌ನ ಅಷ್ಟೊಂದು ಹಿತೈಷಿಗಳ ಭರವಸೆ ಹಾಗೂ ಆಕಾಂಕ್ಷೆಗಳನ್ನು ಕೊಂಡೊಯ್ಯುವುದು ವಿಶೇಷ ಅವಕಾಶವಾಗಿದೆ” ಎಂದು ಹೇಳಿದ್ದಾರೆ.

ಕಾಂಗ್ರಸ್ ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

6ನೇ ಬಾರಿಗೆ ಚುನಾವಣೆ

137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯ ನಂತರ ಅಧ್ಯಕ್ಷರ ಆಯ್ಕೆಗೆ 6ನೇ ಬಾರಿ ಚುನಾವಣೆ ನಡೆದಿದೆ. 1939, 1950, 1977, 1997, 2000 ಮತ್ತು 2022 ಈ ಅವಧಿಯ ಚುನಾವಣೆ ನಡೆಯಿತು. ಉಳಿದಂತೆ ಸಂದರ್ಭದಲ್ಲಿ ಗಾಂಧಿ ಕುಟುಂಬದ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 2000ದಲ್ಲಿ ನಡೆದಿದ್ದ ಅಧ್ಯಕ್ಷರ ಚುನಾವಣೆಯಲ್ಲಿ ಸೋನಿಯಾ ಗಾಂಧಿ, ಎದುರಾಳಿ ಜಿತೇಂದ್ರ ಪ್ರಸಾದ್ ವಿರುದ್ಧ ಭಾರಿ ಅಂತರದಿಂದ ಗೆದ್ದು ಆಯ್ಕೆಯಾಗಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.