ಉಡುಪಿ : ಮಲ್ಪೆ ಅಭಿವೃದ್ಧಿ ಸಮಿತಿ ಇದ್ದರೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಎಂಬ ಇನ್ನೊಂದು ಸಮಿತಿ ಹುಟ್ಟಿಕೊಂಡಿದೆ. ಪಾರ್ಕಿಂಗ್ ಬೋರ್ಡ್ ಹಾಕಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಮಲ್ಪೆ ಬೀಚ್‌ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಸಾಕಷ್ಟು ಸಮಸ್ಯೆಗಳು ಉದ್ಭವವಾಗಿದೆ.
ಬೀಚ್ ವ್ಯವಸ್ಥೆ ನೋಡಿ ಕೊಳ್ಳುವವರು ವಸೂಲಿಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಉಡುಪಿ ನಗಸಭೆ ಸದಸ್ಯ ಯೋಗೀಶ್ ಸಾಲ್ಯಾನ್ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಗರಸಭೆ ಬಿಜೆಪಿ ಸದಸ್ಯ ಯೋಗೀಶ್ ಸಾಲ್ಯಾನ್, ಮಲ್ಪೆ ಅಭಿವೃದ್ಧಿ ಸಮಿತಿ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಡಾ.ಉದಯ ಶೆಟ್ಟಿ, ಮಲ್ಪೆ ಅಭಿವೃದ್ಧಿ ಸಮಿತಿ ಎಂಬುದು ಇದೆ. ಆದರೆ ಬೀಚ್ ಅಭಿವೃದ್ಧಿ ಸಮಿತಿ ಎಂಬುದು ಇಲ್ಲ. ಸ್ಥಳೀಯರೇ ಸೇರಿ ಅದನ್ನು ಮಾಡಿಕೊಂಡಿದ್ದಾರೆ ಎಂದರು.
ಟೆಂಡರ್‌ನಲ್ಲಿ ಇಲ್ಲದ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯವರು ಬೀಚ್‌ನಲ್ಲಿ ಕಚೇರಿ ಕೂಡ ಮಾಡಿಕೊಂಡಿದ್ದಾರೆ. ಪಾರ್ಕಿಂಗ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಟೆಂಡರ್ ಆಗಿರುವುದು ಬೇರೆ ವ್ಯಕ್ತಿಗಳಿಗೆ. ಆದರೆ ಈ ಮೂರನೇ ವ್ಯಕ್ತಿ ಯಾರು. ಇದು ಕಾನೂನಾತ್ಮಕವಾಗಿ ಇರುವ ಸಮಿತಿಯೇ ಎಂದು ಪ್ರಶ್ನಿಸಿದರು.
ಮಾತನಾಡಿದರೆ ಕೊಲೆ ಬೆದರಿಕೆ!
ಸೈಂಟ್ ಮೇರಿಸ್ ದ್ವೀಪದಲ್ಲಿ ನಿಯಮ ಉಲ್ಲಂಘಿಸಿದರೆ 500 ರೂ. ದಂಡ ವಿಧಿಸುವುದಾಗಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಆದರೆ ಕಳೆದ ವರ್ಷ ಇದೇ ದ್ವೀಪದಲ್ಲಿ ಒಂದೇ ವಾರದಲ್ಲಿ ಆರು ಮಂದಿ ಸತ್ತಿದ್ದಾರೆ. ಹಾಗಾದರೆ ಈ ಸಮಿತಿಯವರಿಗೆ ಏನು ದಂಡ ಹಾಕಬೇಕು ಎಂದು ಯೋಗೀಶ್ ಸಾಲ್ಯಾನ್ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಪೆ ಅಭಿವೃದ್ಧಿ ಸಮಿತಿ ಹೆಸರಿನಲ್ಲಿರುವ ವಾಹನ ಸ್ಥಳೀಯರೊಬ್ಬರಿಗೆ ಡಿಕ್ಕಿ ಹೊಡೆದು ಜೀವದ ಜೊತೆ ಆಡುತ್ತಿದೆ. ಈ ವಾಹನಕ್ಕೆ ಆರು ತಿಂಗಳಾದರೂ ಇನ್ನು ನಂಬರ್ ಪ್ಲೇಟ್ ಹಾಕಿಲ್ಲ. ಒಂದೆಡೆ ನೀರಿಗೆ ಬಿದ್ದು ಪ್ರವಾಸಿಗರು ಸತ್ತರೆ, ಇಂತಹ ವಾಹನಗಳಿಂದ ಇಲ್ಲಿ ಸ್ಥಳೀಯರು ಕೂಡ ಸಾಯಿತ್ತಿದ್ದಾರೆ. ಇವರಿಗೆ ಕಾನೂನು ಎಲ್ಲಿದೆ. ಸಮಿತಿಯ ಕಾರ್ಯದರ್ಶಿ ಆಗಿರುವ ಪೌರಾಯುಕ್ತರಿಗೆ ಎಲ್ಲ ಗೊತ್ತಿದ್ದರೂ ಮೌನವಾಗಿದ್ದಾರೆ ಎಂದು ಅವರು ಟೀಕಿಸಿದರು.
ಮಲ್ಪೆಯ ಜನರಿಗೆ ಗೊಂದಲ ಮೂಡಿದೆ. ಮಲ್ಪೆ ಅಭಿವೃದ್ಧಿ ಸಮಿತಿ ಹಾಗೂ ಬೀಚ್ ಅಭಿವೃದ್ಧಿ ಸಮಿತಿ ಎಂಬುದು ಜನರಿಗೆ ಗೊತ್ತೇ ಇಲ್ಲ. ಅವರು ಡಿಸಿಗೆ ಹೆದರಿ ಈ ವ್ಯವಸ್ಥೆಯಲ್ಲಿ ಹೊಂದಿಕೊಂಡು ಹೋಗಿದ್ದಾರೆ. ಈ ಬಗ್ಗೆ ಮಾತನಾಡಿ ದರೆ ನನಗೆ ಫೋನ್ ಬರುತ್ತದೆ. ಮನೆಗೆ ಬಂದು ಹೊಡೆಯುತ್ತೇವೆ, ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ತಿಂಗಳಿಗೆ ನಮಗೂ ಮಾಮೂಲಿ ಬರುತ್ತಿರುವುದರಿಂದ ನಾವು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಜನ ಕೆಟ್ಟದಾಗಿ ಹೇಳುತ್ತಿದ್ದಾರೆ ಎಂದು ಅವರು ನೋವು ತೋಡಿಕೊಂಡರು.
ಗುಡಿಸುವವರೇ ಲೈಫ್‌ಗಾರ್ಡ್!
ಸೈಂಟ್ ಮೇರಿಸ್ ದ್ವೀಪದಲ್ಲಿ ಕಸ ಗುಡಿಸುವವರೇ ಜಾಕೆಟ್ ಹಾಕಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ನೀರಿಗೆ ಬಿದ್ದವರನ್ನು ರಕ್ಷಣೆ ಮಾಡಲು ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಬರಬೇಕು. ಹೋಮ್ ಗಾರ್ಡ್‌ಗಳಿಗೆ ಬಟ್ಟೆ ಬದಲಾಯಿಸಲು ಜಾಗ ಇಲ್ಲದೆ ಅಂಗಡಿ ಮೂಲೆಗಳಿಗೆ ಹೋಗಬೇಕು ಎಂದು ಅವರು ದೂರಿದರು.
ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ಮಲ್ಪೆ ಬೀಚ್‌ನಲ್ಲಿ ದಂಧೆ ನಡೆಸಲಾಗುತ್ತಿದೆ. ಇವರಿಗೆ ಕಾನೂನು ಎಂಬುದೇ ಇಲ್ಲ. ಟೆಂಡರ್‌ನಲ್ಲಿ ಇಲ್ಲದ ಕೆಲಸಗಳನ್ನು ಕಾನೂನು ಚೌಕಟ್ಟು ಮೀರಿ ಮಾಡುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಾನು ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಸ್ಥಳೀಯ ಐದು ಭಜನಾ ಮಂಡಳಿಯವರಿಗೆ ಬೀಚ್ ಪಾರ್ಕಿಂಗ್ ನಿರ್ವಹಣೆ ಜವಾಬ್ದಾರಿ ನೀಡಿದ್ದೇನೆ. ಅವರೇ ಪಾರ್ಕಿಂಗ್ ಹಣ ಸಂಗ್ರಹಿಸುತ್ತಿದ್ದಾರೆ. ಬೀಚ್‌ನಲ್ಲಿ ಕಾನೂನು ವಿರುದ್ಧ ವಾಗಿ ಕೆಲಸ ನಡೆದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. 15 ದಿನಗಳಲ್ಲಿ ಈ ಬಗ್ಗೆ ಸಭೆ ಕರೆದು ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಸಭೆಗೆ ಹಾಜರಾದ ಉಡುಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವೀಣಾ ವಿವೇಕಾನಂದ ಅವರೊಂದಿಗೆ ಅಂಗನವಾಡಿ ಕೇಂದ್ರದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಹಳೆ ತಾಲೂಕು ಕಚೇರಿ ಜಾಗ ದಲ್ಲಿ ನಿರ್ಮಾಣವಾಗಲಿರುವ ನಗರಸಭೆ ಹೊಸ ಕಟ್ಟಡದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಭಜನ ಮಂದಿರಗಳ ಹೆಸರು ದುರುಪಯೋಗ!
ಮಲ್ಪೆ ಬೀಚ್‌ನಲ್ಲಿ ಭಜನಾ ಮಂಡಳಿಗಳನ್ನು ಮುಂದಿಟ್ಟುಕೊಂಡು ಅನ್ಯಾಯ ಮಾಡಲಾಗುತ್ತಿದೆ. ಅದರ ಹೆಸರನ್ನು ದುರುಪಯೋಗ ಮಾಡಿ ಜನರನ್ನು ಹೆದರಿಸ ಲಾಗುತ್ತಿದೆ ಎಂದು ಸದಸ್ಯ ಯೋಗೀಶ್ ಸಾಲ್ಯಾನ್ ಆರೋಪಿಸಿದರು.
ಖಾಸಗಿ ಜಾಗದಲ್ಲಿರುವ ಬಟ್ಟೆ ಅಂಗಡಿಯನ್ನು ತೆರವುಗೊಳಿಸಬೇಕೆಂದು ಇಲ್ಲಿನ ಗುತ್ತಿಗೆದಾರ ಭಜನಾ ಮಂಡಳಿಯ ಹೆಸರು ಹೇಳಿಕೊಂಡು ಬೆದರಿಸುತ್ತಿದ್ದಾರೆ. ಇಲ್ಲಿ ಸ್ಥಳೀಯ ನಗರಸಭೆ ಸದಸ್ಯರನ್ನು ಯಾವುದಕ್ಕೂ ಕರೆಯುವುದಿಲ್ಲ. ಇಲ್ಲಿರುವ ಸ್ಮಶಾನದ ವ್ಯವಸ್ಥೆ ಕೂಡ ಸರಿಯಾಗಿಲ್ಲ ಎಂದು ಅವರು ದೂರಿದರು.