ವಾಣಿಜ್ಯ ಜಾಹಿರಾತು

ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 30 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಪಚ್ಚನಾಡಿ ವೈದ್ಯನಾಥ ನಗರದ ನವೀನ್ ಪೂಜಾರಿ ಅಲಿಯಾಸ್ ನವೀನ್ ಸುವರ್ಣ(42) ಶಿಕ್ಷೆಗೊಳಗಾದ ವ್ಯಕ್ತಿ. ಪ್ರಕರಣದಲ್ಲಿ ಇತರ ಮೂವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಪ್ರಕರಣದ ವಿವರ: ಸಂತ್ರಸ್ತೆ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಈಕೆ ವಾಮಂಜೂರು ತಿರುವೈಲಿನ ಸಂದೀಪ್ ಕುಲಾಲ್ ಎಂಬಾತನೊಂದಿಗೆ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಬಾಲಕಿ ಹಾಗೂ ಸಂದೀಪ್ ಜೊತೆಯಲ್ಲಿರುವುದನ್ನು ನೋಡಿದ್ದ ನವೀನ್ ಸುವರ್ಣ, ಈ ವಿಷಯವನ್ನು ಎಲ್ಲರಿಗೂ ತಿಳಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ, 2017 ಆಗಸ್ಟ್ 16ರಂದು ಬಾಲಕಿಯನ್ನು ತನ್ನ ಪರಿಚಯದ ಮಹಿಳೆಯ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬಳಿಕ ನಾಲ್ಕು ತಿಂಗಳುಗಳವರೆಗೂ ಇದೇ ರೀತಿ ಕೃತ್ಯ ನಡೆಸಿದ್ದ ಎನ್ನಲಾಗಿದೆ.

ನವೀನ್ ಜೊತೆಗೆ ದಾವಣಗೆರೆಯ ಹರಪನಹಳ್ಳಿ ಮಾಚಿಹಳ್ಳಿ ತಾಂಡಾ ಮೂಲದ ಹಾಗೂ ವಾಮಂಜೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಪುನೀತ್ ಕುಮಾರ್ ಎಂಬಾತ ಬಾಲಕಿಯನ್ನು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಬಾಲಕಿ ಗರ್ಭಿಣಿಯಾಗಿದ್ದು, ನಂತರ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂದೀಪ್ ಕುಲಾಲ್ ಸಹಿತ ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಾಗಿತ್ತು.

ಬಾಲಕಿ ಗಂಡು ಮಗುವಿಗೆ ಜನ್ಮನೀಡಿದ್ದು, ಆ ಬಳಿಕ ಮಗುವಿನ ಡಿಎನ್‍ಎ ಪರೀಕ್ಷೆ ನಡೆಸಿದಾಗ ಅದು ನವೀನ್ ಸುವರ್ಣನ ಜೊತೆ ತಾಳೆಯಾಗಿದ್ದು ಆತ ಅತ್ಯಾಚಾರ ಎಸಗಿದ್ದು ದೃಢಪಟ್ಟಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಗ್ರಾಮಾಂತರ ಠಾಣೆ ಇನ್‍ಸ್ಪೆಕ್ಟರ್ ಸಿದ್ದನಗೌಡ ಎಚ್.ಬಜಂತ್ರಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟಾರೆ 51 ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 21 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ವಿಚಾರಣೆ ಕೈಗೊಂಡ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಐಪಿಸಿ  376 ಹಾಗೂ ಫೋಕ್ಸೋ ಕಾಯ್ದೆ ಸೆಕ್ಷನ್ 6ರ ಅಡಿಯಲ್ಲಿ ಆರೋಪಿ ನವೀನ್ ಸುವರ್ಣಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿದರು. ಉಳಿದ ಮೂವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಯಿತು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.