ಮಂಗಳೂರು: ಅಮೃತಸಂಜೀವಿನಿ ರಿ. ಮಂಗಳೂರು ಇದರ 75ನೇ ಮಾಸಿಕ ಯೋಜನೆಯ ಅಂಗವಾಗಿ ಸಂಸ್ಥೆಯ ಅಂಗಸಂಸ್ಥೆ ವೀರಕೇಸರಿ ಕಣ್ಣೂರು ಮತ್ತು ಸಂಜೀವಿನಿ ಏರಮಲೆ ಇದರ ನೇತೃತ್ವದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವು ಕಣ್ಣೂರಿನ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಹಿಂದೂ ಸಮಾಜ ಜಗತ್ತಿಗೆ ಏನನ್ನಾದರು ಕೊಟ್ಟಿದೆಯೆಂದರೆ ಅದು ತ್ಯಾಗ ಮತ್ತು ಶಾಂತಿಯಾಗಿದೆ. ಬೇರೆ ಎಲ್ಲಾ ದೇಶಗಳು ಆಕ್ರಮಣ, ಸಾಮ್ರಾಜ್ಯ ವಿಸ್ತರಣೆ, ಮತ ಪ್ರಚಾರಗಳು ಮಾಡಿದೆ. ಅಮೃತಸಂಜೀವಿನಿ ಕಾರ್ಯಕರ್ತರು ಇವತ್ತು ಅಶಕ್ತರನ್ನು ಗುರುತಿಸಿ ಅವರಿಗೆ ಅಭಯದ ಹಸ್ತವನ್ನು ನೀಡುತ್ತಿದೆ. ಇಂತಹ ಅನೇಕ ಯುವಕರ ತಂಡ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ. ಈ ಮೂಲಕ ರಾಮರಾಜ್ಯದ ಕಲ್ಪನೆ ಬಹುಬೇಗ ಈಡೇರಲಿ ಎಂದರು.
ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ರಾಜಶೇಖರನಂದ ಸ್ವಾಮೀಜಿ ಮಾತನಾಡಿ, ಈ ಸಂಸ್ಥೆಯಲ್ಲಿ ಒಂದು ಸಾವಿರ ಸಂಜೀವಿನಿಗಳು ಇದ್ದಾರೆ. ತಮ್ಮ ದುಡಿಮೆಯ ಹಣದಲ್ಲಿ ಇಂತಿಷ್ಟು ಎಂದು ಪ್ರತಿ ಮಾಸಿಕದಲ್ಲಿ ಅಶಕ್ತರಿಗೆ ನೆರವಾಗಲು ನೀಡುತ್ತಿದ್ದಾರೆ. ಆದರೆ ಅವರು ಯಾರಿಗೂ ಪ್ರಚಾರದ ಬಯಕೆಯಿಲ್ಲ, ಸ್ವಾರ್ಥ ಚಿಂತನೆಗಳಿಲ್ಲ. ಈ ಕಾರಣದಿಂದಾಗಿ ಸಮಾಜದಲ್ಲಿ ಅಮೃತಸಂಜೀವಿನಿ ಗಟ್ಟಿಯಾಗಿ ಬೆಳೆದು ನಿಂತಿದೆ. ಈ ಕಾರ್ಯವು ಅನೇಕರಿಗೆ ಪ್ರೇರಣೆಯಾಗಲಿ ಇನ್ನಷ್ಟು ಜನರು ಸೇರುವಂತಾಗಲಿ ಎಂದರು.
75ನೇ ಈ ಮಾಸಿಕ ಯೋಜನೆಯಲ್ಲಿ ಒಟ್ಟು 31 ಕುಟುಂಬಗಳಿಗೆ ಈ ತಿಂಗಳು ಸಂಗ್ರಹವಾದ ಆರು ಲಕ್ಷದ ಎಂಬತ್ತೆರಡು ಸಾವಿರವನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಲ್ಲಡ್ಕ ಪ್ರಭಾಕರ ಭಟ್, ಪದ್ಮಶ್ರೀ ಪ್ರಶಸ್ತಿ ಪಟ್ಟಿಗೆ ಆಯ್ಕೆಯಾಗಿರುವ ಮಹಾಲಿಂಗ ನಾಯ್ಕ್ ಅಮೈ, ಖ್ಯಾತ ನಿರ್ದೇಶಕ ರಾಜ್ ಬಿ ಶೆಟ್ಟಿ, ಶ್ರೀ ಸಂತೋಷ್ ಕುಮಾರ್ ಶೆಟ್ಟಿ, ಶ್ರೀ ಚಿರಾಗ್ ಆಚಾರ್ಯ, ಭೋಜರಾಜ್ ವಾಮಂಜೂರು ಮುಂತಾದವರು ಉಪಸ್ಥಿತರಿದ್ದರು.