ಮಂಗಳೂರು: ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬರಿಗೆ ಹೆಣ್ಣು ಮಗು ಜನಿಸಿದೆ ಎಂದು ಹೇಳಿ ಹೆಣ್ಣು ಮಗುವಿನ ಬದಲಾಗಿ ಗಂಡು ಮಗು ನೀಡಿರುವ ಕುರಿತು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟೇಶ್ವರ ನಿವಾಸಿಯಾಗಿರುವ ಮುಸ್ತಫಾ ಎನ್ನುವವರು ದೂರು ನೀಡಿದ್ದಾರೆ.
ಸೆಪ್ಟಂಬರ್ 28ರಂದು ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಅಮ್ರೀನ್ ಎಂಬವರು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಿಬ್ಬಂದಿಗಳು ಹೆಣ್ಣು ಮಗು ಆಗಿರುವ ಬಗ್ಗೆ ದಾಖಲೆಗಳ ಮೂಲಕ ತಿಳಿಸಿದ್ದರು.
ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಮಗುವನ್ನು ತೋರಿಸಲು ಸಿಬ್ಬಂದಿಗಳು ನಿರಾಕರಿಸಿದ್ದರು. 18 ದಿನಗಳ ಕಾಲ ಮಗು ಐಸಿಯುನಲ್ಲಿತ್ತು. ನಿನ್ನೆ ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಹೆಣ್ಣು ಮಗುವಿಗೆ ಬದಲು ಗಂಡು ಮಗು ಕೊಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಗುವಿಗೆ ಮಲ ವಿಸರ್ಜನೆ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ಕೊಡಲಾಗಿತ್ತು. ಅದರೆ ಆ ಆಸ್ಪತ್ರೆಯಲ್ಲಿ ಮಗುವನ್ನು ನೋಡಿ ಪೋಷಕರು ಆಶ್ಚರ್ಯಗೊಂಡಿದ್ದಾರೆ. ಯಾಕಂದ್ರೆ ಅಲ್ಲಿ ಹೆಣ್ಣು ಮಗು ಬದಲಿಗೆ ಗಂಡು ಮಗುವಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು.
ಸರಕಾರಿ ಆಸ್ಪತ್ರೆಯಲ್ಲಿಯೇ ಮಗುವನ್ನು ಬದಲಾವಣೆ ಮಾಡಿ ಮಹೇಶ್ ಆಸ್ಪತ್ರೆಗೆ ಕಳುಹಿಸಿದ್ದಾರೆಂದು ಸಂಶಯಿಸಿ ಪೋಷಕರು ವಾಪಸ್ ಮಂಗಳೂರು ಆಸ್ಪತ್ರೆಗೆ ಮಗುವನ್ನು ಕರೆ ತಂದು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ನ್ಯಾಯಕ್ಕಾಗಿ ಮಗುವಿನ ತಂದೆ ಮುಸ್ತಫಾ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಗುವನ್ನು ಬದಲಿಸಿಲ್ಲ ಎಂದು ಲೇಡಿಗೋಶನ್ ಆಸ್ಪತ್ರೆ ಸ್ಪಷ್ಟನೆ
ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆಗಿರುವ ಆರೋಪದ ಬಗ್ಗೆ ಲೇಡಿಗೋಶನ್ ಆಸ್ಪತ್ರೆ ಸ್ಪಷ್ಟನೆ ನೀಡಿದೆ. ಮಗುವಿನ ಜನನದ ಲಿಖಿತ ರೂಪದ ಎಂಟ್ರಿ ವೇಳೆ ಕರ್ತವ್ಯದಲ್ಲಿದ್ದವರಿಂದ ತಪ್ಪಾಗಿದೆ. ಇದು ಪ್ರಮಾದ, ಕಣ್ತಪ್ಪಿನಿಂದ ಗಂಡು ಮಗು ಎಂದು ನಮೂದಿಸುವ ಬದಲು ಹೆಣ್ಣು ಮಗು ಎಂದು ವೈದ್ಯರು ಬರೆದಿದ್ದರು, ಅಷ್ಟೇ ಹೊರತು ಮಗು ಬದಲಾಗಿಲ್ಲ. ಈ ಬಗ್ಗೆ ಕ್ಷಮೆ ಯಾಚಿಸುತ್ತೇವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
‘ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು. ಮಾತ್ರವಲ್ಲದೆ ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಗಿದ್ದು, ಅವರಿಗೂ ಪ್ರಕರಣದ ವರದಿಯನ್ನು ಶೀಘ್ರವೇ ಒಪ್ಪಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ತನಿಖೆಗೆ ಸೂಚನೆ ನೀಡಿದ್ದೇನೆ- ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ‘ಹೆರಿಗೆ ಆದಾಕ್ಷಣ ಲಿಖಿತ ರೂಪದ ದಾಖಲಾತಿ ವೇಳೆ ತಪ್ಪಾಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ. ಮಗುವಿನ ಬಗ್ಗೆ ಗೊಂದಲ ಇದ್ದಾಗ ಅದು ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಪೋಷಕರಿಗೂ ಮಾನಸಿಕ ಕಿರುಕುಳಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಸೂಚನೆ ನೀಡಿದ್ದೇನೆ.’ ಎಂದು ಹೇಳಿದ್ದಾರೆ.
‘ಡಿಎನ್‌ಎ ವಿಶ್ಲೇಷಣೆ ಬೇಕಿದ್ದಲ್ಲಿ ಅದನ್ನು ಮಾಡಿಕೊಂಡು ಆಗಿರುವ ತಪ್ಪನ್ನು ಒಪ್ಪಿಕೊಂಡು ಪೋಷಕರಿಗೆ ಆಗಿರುವ ಗೊಂದಲವನ್ನು ನಿವಾರಿಸಲು ಸೂಚಿಸಲಾಗಿದೆ. ಕೆಲಸದ ಒತ್ತಡ ಏನೇ ಇದ್ದರೂ ದಾಖಲಾತಿ ಸಂದರ್ಭದಲ್ಲಿಯೂ ಇಂತಹ ತಪ್ಪುಗಳು ಆಗಬಾರದು’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.