ಮಂಗಳೂರು: ಮಂಗಳೂರಿನಿಂದ ಹೊರಟಿದ್ದ ಸರಕು ಸಾಗಣೆ ರೈಲಿನ ಗ್ಯಾಸ್ ಟ್ಯಾಂಕ್ನಿಂದ ಗ್ಯಾಸ್ ಸೋರಿಕೆಯಾದ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ರೈಲನ್ನು ಮರಳಿ ರೈಲ್ವೆ ಸ್ಟೇಷನ್ ಗೆ ಕರೆತರಲಾಗಿದೆ. ಈ ಹಿನ್ನೆಲೆಯಲ್ಲಿ ಜೋಕಟ್ಟೆ ಬಳಿ ರೈಲ್ವೆ ಹಳಿ ಸುತ್ತಮುತ್ತ ಜನಸಂಚಾರ ನಿರ್ಬಂಧ ವಿಧಿಸಲಾಗಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಹೆಚ್ಪಿಸಿಎಲ್) ನಿಂದ ಟ್ಯಾಂಕರ್ಗಳಲ್ಲಿ ಗ್ಯಾಸ್ ತುಂಬಿಸಿ ಕಳುಹಿಸಲಾಗಿತ್ತು. ಆದರೆ, ರೈಲು ಏಳು ಕಿಲೋಮೀಟರ್ ಹೋಗುತ್ತಿದ್ದಂತೆ ಬಳಿಕ ಗ್ಯಾಸ್ ಸೋರಿಕೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರೈಲು ವಾಪಾಸ್ ಹೆಚ್ಪಿಸಿಎಲ್ಗೆ ಆಗಮಿಸಿದೆ, ಪರಿಶೀಲನೆ ನಡೆಸಲಾಗುತ್ತಿದೆ.
ಗ್ಯಾಸ್ ಸೋರಿಕೆಯಾದ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಜೋಕಟ್ಟೆ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರೈಲ್ವೆ ಗೇಟ್ ಬಳಿ ಅಗ್ನಿಶಾಮಕ ವಾಹನ ನಿಯೋಜನೆ ಮಾಡಲಾಗಿದ್ದು, ರೈಲ್ವೆ ಹಳಿ ಸುತ್ತಮುತ್ತಲೂ ನಾಗರಿಕರು ಬರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಘಟನೆಯಿಂದ ಜೋಕಟ್ಟೆ ಪ್ರದೇಶದ ಜನರು ಆತಂಕಗೊಂಡಿದ್ದಾರೆ.