ವಾಣಿಜ್ಯ ಜಾಹಿರಾತು

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕರ್ತವ್ಯಲೋಪ ಎಸಗಿದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಗರದ ಆರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಪೋಕ್ಸೋ ಪ್ರಕರಣವೊಂದರಲ್ಲಿ ಸರಿಯಾಗಿ ತನಿಖೆ ಮಾಡದೆ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಪಿಎಸ್‍ಐ ರೋಸಮ್ಮ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಠಾಣೆಯೊಳಗೇ ಮದ್ಯದ ಪಾರ್ಟಿ ಮಾಡಿದ ಪೊಲೀಸ್ ಸಿಬ್ಬಂದಿ ಅಮಾನತು

ಮತ್ತೊಂದು ಘಟನೆಯಲ್ಲಿ ಪೊಲೀಸ್ ಠಾಣೆಯೊಳಗೇ ಮದ್ಯದ ಪಾರ್ಟಿ ಮಾಡಿದ್ದಾರೆ ಎಂದು ಐವರನ್ನು ಅಮಾನತು ಮಾಡಲಾಗಿದೆ. ಠಾಣೆಯಲ್ಲಿ ಮದ್ಯ ಸೇವಿಸಿದ ಇಬ್ಬರು ಸಹಾಯಕ ಸಬ್ ಇನ್ಸ್ ಪೆಕ್ಟರ್, ಇಬ್ಬರು ಹೆಡ್ ಕಾನ್ಸ್ ಟೇಬಲ್ ಮತ್ತು ಒಬ್ಬ ಕಾನ್ ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ.

ಠಾಣೆಯಲ್ಲಿ ಮದ್ಯ ಸೇವನೆ ಮಾಡಿರುವುದಕ್ಕೆ ಸಿಸಿಟಿವಿ ದಾಖಲೆಯಿದ್ದು, ಈ ಬಗ್ಗೆ ಸಿಸಿಪಿ, ಡಿಸಿಪಿ ತನಿಖೆ ನಡೆಸಿದ್ದಾರೆ. ಈ ಮೂಲಕ ಅವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆ ಮಹಿಳಾ ಪೊಲೀಸ್ ಠಾಣೆಯ ಇಬ್ಬರು ಎಎಸ್‌ಐ, ಇಬ್ಬರು ಹೆಡ್ ಕಾನ್​​ಸ್ಟೇಬಲ್ ಹಾಗೂ ಓರ್ವ ಕಾನ್​​​ಸ್ಟೇಬಲ್ ಅಮಾನತು ಆಗಿದ್ದಾರೆ‌ ಎಂದು ಮಂಗಳೂರು ಮಹಾನಗರ ಪೊಲೀಸ್​ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದ್ದಾರೆ.

ಕರ್ತವ್ಯದ ಅವಧಿಯಲ್ಲಿ ಮಾಡಿರುವ ಡ್ಯಾನ್ಸ್ ಅಲ್ಲ- ಶಶಿಕುಮಾರ್ ಎನ್.

ಮಂಗಳೂರು ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಸಹಿತ ಪೊಲೀಸರು ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ಮಾಡಿದ್ದರೆನ್ನಲಾದ ಬ್ರೇಕ್ ಡ್ಯಾನ್ಸ್ ವೀಡಿಯೋ ಬುಧವಾರ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್​ ಆಯುಕ್ತ ಶಶಿಕುಮಾರ್ ಎನ್., ‘ಇದು ಠಾಣೆಯಲ್ಲಿ ಬ್ರೇಕ್ ಡ್ಯಾನ್‍ ಮಾಡಿರುವ ವೀಡಿಯೋ ಅಲ್ಲ, ಕರ್ತವ್ಯದ ಅವಧಿಯಲ್ಲಿ ಯಾರೂ ಬ್ರೇಕ್ ಡ್ಯಾನ್ಸ್ ಮಾಡಿಲ್ಲ. ಕಳೆದ ದಸರಾ ಹಬ್ಬದ ಸಂದರ್ಭ ಕಲಾತಂಡದೊಂದಿಗೆ ನಡೆಸಿರುವ ಸಂಭ್ರಮಾಚರಣೆಯ ವೀಡಿಯೋ ಆಗಿದೆ. ಈ ಸಂಭ್ರಮಾಚರಣೆಯಲ್ಲಿ ಠಾಣೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು’. ಎಂದು ತಿಳಿಸಿದ್ದಾರೆ.

ಅಲ್ಲದೆ, ‘ಈ ಸಂಭ್ರಮಾಚರಣೆಯನ್ನು ಇಲಾಖೆಯ ಸೂಚನೆ ಮೇರೆಗೆ ಮಾಡಲಾಗಿತ್ತು. ಘಟನೆಯಲ್ಲಿ ಯಾವುದೇ ರೀತಿಯ ತಪ್ಪು ಇಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಶಿಸ್ತಿನ ಕ್ರಮ ಜರುಗಿಸಿಲ್ಲ’ ಎಂದು ಹೇಳಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.