ವಾಣಿಜ್ಯ ಜಾಹಿರಾತು

ಮಂಗಳೂರು: ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುವಿನ ಸ್ತಬ್ಧಚಿತ್ರವನ್ನು ನಿರಾಕರಿಸಿರುವುದನ್ನು ವಿರೋಧಿಸಿ ಬಿಲ್ಲವ ಸಂಘಟನೆಗಳು ಹಮ್ಮಿಕೊಂಡಿರುವ ನಾರಾಯಣ ಗುರುವಿನ ಸ್ತಬ್ಧಚಿತ್ರದ ಮೆರವಣಿಗೆ ಮತ್ತು ಸ್ವಾಭಿಮಾನದ ನಡಿಗೆ ಬುಧವಾರ ನಡೆಯಿತು.

ಕಂಕನಾಡಿ ಗರೋಡಿ ಕ್ಷೇತ್ರದ ಹೊರ ಆವರಣದಿಂದ ನಾರಾಯಣಗುರುಗಳ ಬೃಹತ್ ಭಾವಚಿತ್ರ ಹಾಗೂ ಮೂರ್ತಿಯನ್ನು ಒಳಗೊಂಡ ಸ್ತಬ್ಧಚಿತ್ರಗಳೊಂದಿಗೆ ಹೊರಟ ಭಾರೀ ವಾಹನಗಳ ಜಾಥಾಕ್ಕೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ನಾರಾಯಣ ಗುರುವಿನ ಹತ್ತಾರು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ನೂರಾರು ಮಂದಿ ಹಳದಿ ಶಾಲು ಹಾಕಿಕೊಂಡು ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಹಲವು ಮಂದಿ ಹಳದಿ ಬಾವುಟದೊಂದಿಗೆ ಕಾರು, ದ್ವಿಚಕ್ರ ವಾಹನದಲ್ಲಿ ಪಾಲ್ಗೊಂಡರು. ಮೆರವಣಿಗೆಯ ಮುಂದೆ ಚೆಂಡೆ ಪ್ರದರ್ಶನ ಗಮನಸೆಳೆಯಿತು.

ನಾರಾಯಣ ಗುರುಗಳ ಸ್ತಬ್ಧಚಿತ್ರಗಳು ಪಂಪ್‌ವೆಲ್‌ಗೆ ಬರುತ್ತಿದ್ದಂತೆ ಎರಡು ಜೆಸಿಬಿಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ನಂತರ ಮೆರವಣಿಗೆಯು ಜ್ಯೋತಿ ಸರ್ಕಲ್‌, ಹಂಪನಕಟ್ಟೆ ಸಿಗ್ನಲ್‌, ಕೆ.ಎಸ್‌.ರಾವ್‌ ರಸ್ತೆ, ನವಭಾರತ್‌ ಸರ್ಕಲ್‌, ಪಿವಿಎಸ್‌, ಎಂ.ಜಿ.ರಸ್ತೆ, ಲೇಡಿಹಿಲ್‌, ಮಣ್ಣಗುಡ್ಡೆ ಮೂಲಕ ಕುದ್ರೋಳಿ ಕ್ಷೇತ್ರಕ್ಕೆ ತಲುಪಿತು.

ಕುದ್ರೋಳಿ ಗೋಕರ್ಣ ದೇವಸ್ಥಾನದಲ್ಲಿ ಅವರಣದಲ್ಲಿ ಸ್ವಾಭಿಮಾನದ ನಡಿಗೆ ಉದ್ದೇಶಿಸಿ ಮಾತನಾಡಿದ ಜನಾರ್ದನ ಪೂಜಾರಿ, ದೇವರು ನಿಮಗೆ ಎಲ್ಲರಿಗೂ ಒಳ್ಳೆಯದು ಮಾಡಲಿ. ಬ್ರಹ್ಮ ಶ್ರೀ ನಾರಾಯಣ ಗುರುಗಳ ಆಶೀರ್ವಾದ ನಿಮ್ಮ ಮೇಲೆ ಇರಲಿ, ದೇವರು ನಿಮ್ಮನ್ನು ರಕ್ಷಣೆ ಮಾಡುತ್ತಾನೆ. ಹೆಚ್ಚು ಮಾತನಾಡುವ ಶಕ್ತಿ ಇಲ್ಲ ಕ್ಷಮಿಸಿ, ಶಕ್ತಿ ಬಂದಾಗ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ಕಣ್ಣೀರು ಹಾಕಿದರು.

ಕುದ್ರೋಳಿ ಗೋಕರ್ಣಾನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌, ನಾರಾಯಣ ಗುರು ವಿಚಾರವಾದಿ ವೇದಿಕೆ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌, ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಶಾಸಕ ಯು.ಟಿ. ಖಾದರ್‌, ಮಾಜಿ ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಕಂಕನಾಡಿ ಗರಡಿಯ ಅಧ್ಯಕ್ಷ ಚಿತ್ತರಂಜನ್‌, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್‌ ಮತ್ತಿತರರು ಇದ್ದರು.

ಸ್ವಾಭಿಮಾನದ ನಡಿಗೆ ವೇಳೆ ಹಲವು ಸ್ತಬ್ಧಚಿತ್ರಗಳು, ನೂರಾರು ವಾಹನಗಳು ಭಾಗವಹಿಸಿರುವುದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.