ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ಗೊಂದಲದಿಂದಾಗಿ ಇಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನೇ ಮುಂದೂಡಿದ ಘಟನೆ ನಡೆದಿದೆ.
ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪ್ರಶ್ನೆ ಪತ್ರಿಕೆಯ ಬದಲಿಗೆ ಕಾಲೇಜುಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರಥಮ ಸೆಮಿಸ್ಟರ್‌ನ ಕನ್ನಡ ಪ್ರಶ್ನೆ ಪತ್ರಿಕೆಗಳು ಪೂರೈಕೆಯಾಗಿವೆ. ಪ್ರಶ್ನೆಪತ್ರಿಕೆಯಲ್ಲಿ ದ್ವಿತೀಯ ಸೆಮಿಸ್ಟರ್ ಎಂದೇ ಟೈಟಲ್ ಇದ್ದರೂ, ಪ್ರಶ್ನೆಗಳು ಪ್ರಥಮ ಸೆಮಿಸ್ಟರ್‌ನದ್ದಾಗಿತ್ತು. ಇದರಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕೊನೆ ಘಳಿಗೆಯಲ್ಲಿ ಪರೀಕ್ಷೆಯನ್ನೇ ಮುಂದೂಡಿದೆ. ಜತೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಕಾಲೇಜುಗಳಿಗೆ ಪೂರೈಕೆ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಸಂಬಂಧಪಟ್ಟ ವಿಭಾಗ (ಬಿಬಿಎ ಆಡಳಿತ ಮಂಡಳಿ)ದ ಮುಖ್ಯಸ್ಥರಿಗೆ ಮಂಗಳೂರು ವಿವಿ ಕುಲಪತಿ ನೋಟಿಸ್ ಜಾರಿ ಮಾಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳ ಪ್ರಶ್ನೆಪತ್ರಿಕೆಗಳ ತಯಾರಿ ಆಯಾ ವಿಭಾಗದ ಮುಖ್ಯಸ್ಥರ ಹೊಣೆಗಾರಿಕೆಯಾಗಿರುತ್ತದೆ. ಮುಖ್ಯಸ್ಥರ ಮೇಲುಸ್ತುವಾರಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಗೊಂಡು ಸೀಲ್ ಆಗಿಯೇ ಮುದ್ರಣಕ್ಕೆ ಹೋಗಿ ಅಲ್ಲಿಂದ ಸೀಲ್ ಆಗಿಯೇ ಪರೀಕ್ಷೆಯ ದಿನಗಳಂದು ಕಾಲೇಜುಗಳಿಗೆ ತಲುಪುತ್ತದೆ. ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪರೀಕ್ಷೆಯ ಸಂದರ್ಭ ಇಂದು ಈ ಗೊಂದಲ ಉಂಟಾಗಿದೆ ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯಕ್ಕೊಳಪಡುವ 34 ಕಾಲೇಜುಗಳಲ್ಲಿ ಬಿಬಿಎ ಕೋರ್ಸ್‌ಗಳನ್ನು ಕಲಿಸಲಾಗುತ್ತಿದೆ. ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪರೀಕ್ಷೆಯ ಟೈಟಲ್‌ನಲ್ಲಿ ಪ್ರಥಮ ಸೆಮಿಸ್ಟರ್‌ನ ಪ್ರಶ್ನೆ ಪತ್ರಿಕೆಗಳು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪೂರೈಕೆಯಾಗಿತ್ತು. ಇದು ಗಮನಕ್ಕೆ ಬಂದಾಕ್ಷಣ ಪ್ರಶ್ನೆ ಪತ್ರಿಕೆಗಳನ್ನು ಹಿಂಪಡೆಯಲಾಗಿದೆ. ಪರೀಕ್ಷೆಯನ್ನು ಸದ್ಯ ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆ ಆಗಿದೆ. ಕುಲಪತಿಯೊಂದಿಗೆ ಚರ್ಚಿಸಿ ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದು. ಈ ಘಟನೆಗೆ ಸಂಬಂಧಿಸಿ ಬಿಬಿಎ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ ಎಂದು ಪ್ರೊ. ಪಿ.ಎಲ್.ಧರ್ಮ ತಿಳಿಸಿದ್ದಾರೆ.