ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಾಟಿಪಳ್ಳದಲ್ಲಿ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟ ಅಬ್ದುಲ್ ಜಲೀಲ್ ಕೊಲೆ ಪ್ರರಕಣ ಸಂಬಂಧ ವಿಧಾನಸಭೆಯಲ್ಲಿ ವಿಪಕ್ಷ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಶೂನ್ಯ ವೇಳೆಯಲ್ಲಿ ಪ್ರಕರಣವನ್ನು ಪ್ರಸ್ತಾಪ ಮಾಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಅಬ್ದುಲ್ ಜಲೀಲ್ನನ್ನು ಕೋಮುವಾದಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಅನೈತಿಕ ಗೂಂಡಾಗಿರಿಗೆ ಕೂಡಲೇ ಸರ್ಕಾರ ಕಡಿವಾಣ ಹಾಕಬೇಕು. ದುಷ್ಕರ್ಮಿಗಳ ಕೈಯಲ್ಲಿ ಸಮಾಜ ಕೊಟ್ಟು ಸುಮ್ಮನಿರುವುದು ಸರಿಯಲ್ಲ. ಸರ್ಕಾರ ಪರಿಹಾರ ಕೊಡಲ್ಲ, ಇನ್ನೊಂದು ಕಡೆ ಯುಎಪಿಎ ಹಾಕಲ್ಲ. ಈ ರೀತಿ ಸರ್ಕಾರದ ತಾರತಮ್ಯ ಸರಿಯಲ್ಲ ಎಂದು ಟೀಕಿಸಿದರು.
ಈ ವೇಳೆ ಎದ್ದುನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ, ದಕ್ಷಿಣ ಕನ್ನಡದಲ್ಲಿ ಅನೇಕ ಕಡೆ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಎರಡು ಬಾರಿ ಮುಖ್ಯಮಂತ್ರಿಯವರು ಮಂಗಳೂರಿಗೆ ಹೋದಾಗಲೇ ಇಂತಹ ಕೊಲೆ ಆಗಿದೆ. ಆಕ್ಷನ್ಗೆ ರಿಯಾಕ್ಷನ್ ಅಂತಾ ಮುಖ್ಯಮಂತ್ರಿಯವರು ಪ್ರಚೋದನೆ ರೀತಿ ಹೇಳುತ್ತಾರೆ. ಮುಸಲ್ಮಾನರು ಕೊಲೆಯಾದರೆ ಸರ್ಕಾರದ ದುಡ್ಡನ್ನು ಯಾಕೆ ಕೊಡಲ್ಲ ಎಂದು ಪ್ರಶ್ನಿಸಿದರು.
ಕರಾವಳಿ ಪ್ರದೇಶದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ನೈತಿಕ ಪೊಲೀಸ್ ಗಿರಿ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜಲೀಲ್ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಜಲೀಲ್ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಯು.ಟಿ.ಖಾದರ್ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಎಲ್ಲಾ ಪ್ರಕರಣಗಳಿಗೂ ಪರಿಹಾರ ಕೊಡಲು ಆಗುವುದಿಲ್ಲ. ನೈತಿಕ ಪೊಲೀಸ್ಗಿರಿ ನಡೆಯುವುದಕ್ಕೆ ಅವಕಾಶ ಕೊಡಲ್ಲ. ನಾವು ಯಾರಿಗೂ ಫ್ರೀ ಹ್ಯಾಂಡ್ ಕೊಟ್ಟಿಲ್ಲ ಎಂದರು. ಅಲ್ಲದೆ, ಈ ಪ್ರಕರಣ ಕುರಿತು ಗೃಹ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ವಿಧಾನ ಪರಿಷತ್ನಲ್ಲಿಯೂ ಮಂಗಳೂರಿನ ಜಲೀಲ್ ಹತ್ಯೆ ಪ್ರಕರಣ ಸದ್ದು ಮಾಡಿದೆ. ಜಲೀಲ್ ಹತ್ಯೆ ಪ್ರಕರಣ ಕುರಿತು ಚರ್ಚೆಗೆ ವಿಪಕ್ಷ ಕಾಂಗ್ರೆಸ್ ಒತ್ತಾಯ ಮಾಡಿತು. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನಿಯಮ 59 ಅಡಿ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿದರು.