ಮಂಗಳೂರು : ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ನಿರ್ಣಾಯಕ ಹೋರಾಟ ಹಿನ್ನೆಲೆ,ಟೋಲ್ ವಿರೋಧಿ ಹೋರಾಟ ಸಮಿತಿಯವರು ಇಂದು ಬೆಳಗ್ಗೆ ಪ್ರತಿಭಟನೆ ಆರಂಭಿಸಿದ್ದಾರೆ. ಮಂಗಳೂರಿನ ಹೊರ ವಲಯದ ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಟೋಲ್ ಕಿತ್ತೆಸೆಯೋದಾಗಿ ಟೋಲ್ ವಿರೋಧಿ ಸಮಿತಿ ಎಚ್ಚರಿಕೆ ನೀಡಿದೆ.
ಟೋಲ್ ಗೇಟ್ ಗಿಂತ ಸುಮಾರು 50 ಮೀಟರ್ ದೂರದಲ್ಲಿ ಜಮಾಯಿಸಿರುವ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಸಂಸದ, ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಸುರತ್ಕಲ್ ಟೋಲ್ ಹೋರಾಟ ಸಮಿತಿ ಪ್ರಮುಖರಾದ ಮುನೀರ್ ಕಾಟಿಪಾಳ್ಯ , ಮಾಜಿ ಶಾಸಕರಾದ ಐವನ್ ಡಿಸೋಜ , ಶಕುಂತಲಾ ಶೆಟ್ಟಿ , ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಪ್ರಮುಖರಾದ ಮಿಥುನ್ ರೈ, ಶಶಿಧರ್ ಹೆಗ್ಡೆ , ಪ್ರತಿಭಾ ಕುಳಾಯಿ, ಬಿ.ಕೆ.ಇಮ್ತಿಯಾಝ್ ಮೊದಲಾದದವರು ಹೋರಾಟಕ್ಕೆ ನೇತೃತ್ವ ವಹಿಸಿದ್ದಾರೆ.
ಪ್ರತಿಭಟನೆ ಹಿನ್ನಲೆಯಲ್ಲಿ ಟೋಲ್ ಸುತ್ತ 6 ಕೆಎಸ್ಆರ್ ಪಿ, 5 ಸಿಎಆರ್, 250 ಸಿವಿಲ್, 4 ಎಸಿಪಿ, 15 ಇನ್ಸ್ ಪೆಕ್ಟರ್ ಸೇರಿದಂತೆ500 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಬ್ಯಾರಿಕೇಡ್ ಗಳನ್ನು ಬಳಸಿ ಟೋಲ್ ಗೇಟ್ ಗಿಂತ ಸುಮಾರು 50 ಮೀಟರ್ ದೂರದಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ.
500ಕ್ಕೂ ಹೆಚ್ಚು ಮಂದಿಯ ಬಂಧನ
ಸುರತ್ಕಲ್ ಟೋಲ್ ಅನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಬೃಹತ್ ಪ್ರತಿಭಟನೆ ಹಿನ್ನೆಲೆ ಪೊಲೀಸರು 500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
ಸುರತ್ಕಲ್ ಟೋಲ್ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಮಿಥುನ್ ರೈ, ವಿನಯ್ ಕುಮಾರ್ ಸೊರಕೆ ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ