ವಾಣಿಜ್ಯ ಜಾಹಿರಾತು

ಮಂಗಳೂರು:ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ ವಿಲೇವಾರಿ ಚಾಲಕರ ಸೇವೆಯನ್ನು ಮರಳಿ ಟೆಂಡರ್‌ಗೆ ವಹಿಸದಂತೆ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ನ ಹೊರಗುತ್ತಿಗೆ ನೌಕರರ ಸಂಘ ಹಾಗೂ ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘವು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣ ಗೌಡ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸ್ಪಚ್ಛತಾ ವಾಹನ ಚಾಲಕರನ್ನು ಗುತ್ತಿಗೆ ಪದ್ದತಿಯಿಂದ ಕೈಬಿಟ್ಟು ಪೌರಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿ ಮಾಡುವಂತೆ ಸಂಘವು ರಾಜ್ಯಾದ್ಯಾಂತ ಹೋರಾಟ ರೂಪಿಸಿತ್ತು. ಈ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಸ್ವಚ್ಛತೆಯಲ್ಲಿ ತೊಡಗಿಕೊಂಡಿರುವ ವಾಹನ ಚಾಲಕರು, ಯುಜಿಡಿ ಕಾರ್ಮಿಕರನ್ನು ನೇರ ಪಾವತಿಗೆ ತರುವುದಾಗಿ ನಿರ್ಣಯ ಕೈಗೊಂಡಿತ್ತು. ಈ ಬಗ್ಗೆ ಸ್ವತ: ಮುಖ್ಯಮಂತ್ರಿಗಳೇ ಈ ತೀರ್ಮಾನವನ್ನು ಘೋಷಿಸಿದ್ದಾರೆ. ಹೀಗಿರುವಾಗ ಮಂಗಳೂರು ನಗರಪಾಲಿಕೆ ಸ್ವಚ್ಛತಾ ವಾಹನ ಚಾಲಕರನ್ನು ಮರಳ ಟೆಂಡರ್‌ ಪದ್ಧತಿಗೆ ಒಳಪಡಿಸುವುದು ಸರಿಯಾದ ಕ್ರಮವಲ್ಲ. ಸ್ವಚ್ಛತಾ ವಾಹನ ಚಾಲಕರ ಕರ್ತವ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಿತ ಸಮಯಪಾಲನ ಇಲ್ಲದೆ ಪ್ರಾಣಿಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಸಕಾಲಕ್ಕೆ ವೇತನ ನೀಡದೇ ಕಿರುಕುಳ ನೀಡಲಾಗುತ್ತಿದೆ. ಹೊರಗುತ್ತಿಗೆ ಎಂಬುದು ಸರಕಾರದ ಅಧಿಕೃತ ಜೀತಗಾರಿಕೆ ಎಂಬಂತಾಗಿದೆ ಎಂದು ಕಿಡಿಕಾರಿದರು.

ಟೆಂಡರ್ ಮಂಜೂರಾತಿಗಾಗಿ ಮಂಗಳೂರು ನಗರ ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವವನ್ನು ಹಿಂಪಡೆದು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ಕ್ರಮ ವಹಿಸಬೇಕು. ಇದರಿಂದ ಗುತ್ತಿಗೆದಾರರಿಗೆ ನೀಡುವ ಶೇ.5ರಷ್ಟು ಸೇವಾ ಶುಲ್ಕ, ಶೇ.18ರಷ್ಟು ಜಿಎಸ್‌ಟಿ ಸೇರಿ ನಗರ ಪಾಲಿಕೆಗೆ ವಾರ್ಷಿಕ ಎರಡು ಕೋಟಿ ಹಣ ಉಳಿತಾಯವಾಗಲಿದೆ ಎಂದರು.

ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ಖಾಯಂ ಪ್ರಕ್ರಿಯೆ ಆರಂಭವಾದರೆ, ಮಂಗಳೂರು ಮಹಾನಗರ ಪಾಲಿಕೆ ಆಯಂಟನಿ ವೇಸ್ಟ್ ಕಂಪೆನಿಯೊಂದಿಗೆ ಮಾಡಿಕೊಂಡ ಅವೈಜ್ಞಾನಿಕ ಗುತ್ತಿಗೆ ಪದ್ದತಿ ಹಾಗೂ ವಯೋಮಿತಿ ಇತ್ಯಾದಿ ಕಾರಣದಿಂದ ಪೌರ ಕಾರ್ಮಿಕರು ಕೆಲಸದಿಂದ ವಂಚಿತರಾಗುತ್ತಿದ್ದಾರೆ. ಅಂತಿಮವಾಗಿ 111 ಮಂದಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದ್ದು, ಇನ್ನು 207 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸಲು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.