ವಾಣಿಜ್ಯ ಜಾಹಿರಾತು

ಮಂಗಳೂರು: ಶಿಕ್ಷಣ, ಕೈಗಾರಿಕೋದ್ಯಮ, ಕೃಷಿ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣಬೇಕಾದರೆ ಎಲ್ಲರೂ ಕೈಜೋಡಿಸಬೇಕಿದೆ. ಪ್ರತಿಯೊಬ್ಬರು ಸಹ ಸ್ವಾವಲಂಬಿ ಜೀವನವನ್ನು ನಡೆಸಿದಾಗ ಮಾತ್ರ ನಿಜವಾದ ಸ್ವಾತಂತ್ರ್ಯದ ಅರ್ಥ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.

ಬಳಿಕ ಮಾತನಾಡಿದ ಅವರು, ರಾಷ್ಟ್ರ ಪ್ರೇಮ ಮತ್ತು ದೇಶ ಪ್ರೇಮವನ್ನು ಪ್ರತಿಯೊಬ್ಬ ಭಾರತೀಯರಲ್ಲಿ ಬಿತ್ತಲು ಮತ್ತು ಬೆಳೆಸಲು ಇದೇ ಅಗಸ್ಟ್-13 ರಿಂದ ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಲು “ಹರ್ ಘರ್ ತಿರಂಗ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು, ಈ ಅಭಿಯಾನವನ್ನು ಯಶಸ್ವಿಗೊಳಿಸಲು ಧ್ವಜಸಂಹಿತೆಗೆ ತಿದ್ದುಪಡಿ ತರುವ ಮೂಲಕ ಪ್ರತಿಯೊಬ್ಬ ನಾಗರೀಕ ತಮ್ಮ ಮನೆಯ ಕಟ್ಟಡದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅದರಂತೆ ಎಲ್ಲಾ ಮನೆಗಳ, ಸರ್ಕಾರಿ ಕಚೇರಿ ಕಟ್ಟಡಗಳ, ಸರ್ಕಾರೇತರ ಸಂಘಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ, ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 5 ಲಕ್ಷಕ್ಕೂ ಹೆಚ್ಚು ರಾಷ್ಟ್ರ ಧ್ವಜಗಳನ್ನು ಮನೆಗಳು, ಅಂಗಡಿಗಳು, ಸರ್ಕಾರಿ ಕಟ್ಟಡಗಳು ಇನ್ನಿತರ ಎಲ್ಲಾ ಕಟ್ಟಡಗಳ ಮೇಲೆ ಹಾರಿಸಲಾಗಿದೆ ಎಂದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದಿಂದ ಅಮೃತ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಅನುಷ್ಠಾನವನ್ನು ಸಹ ಯಶಸ್ವಿಯಾಗಿ ಮಾಡಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರು ಹೇಳುವಂತೆ 2025ರ ಹೊತ್ತಿಗೆ ಭಾರತ ವಿಶ್ವಗುರು ಸ್ಥಾನಕ್ಕೆ ಏರಲು ಭಾರತೀಯರು ದೃಢಸಂಕಲ್ಪ ಮಾಡಬೇಕು. ಮಹಾತ್ಮಗಾಂಧಿ ಕಂಡ ಕನಸಿನ ಭಾರತವನ್ನು ನನಸು ಮಾಡುವ ಪಣತೊಡಬೇಕು. ವಿಜ್ಞಾನ, ತಂತ್ರಜ್ಞಾನ, ಸಂಶೋಧನೆಗಳು ಹಾಗೂ ಆವಿಷ್ಕಾರಗಳ ಮೂಲಕ ರಚನಾತ್ಮಕ ಮತ್ತು ಪ್ರಗತಿದಾಯಕ ಬದಲಾವಣೆಗೆ ಪ್ರತಿಯೊಬ್ಬರು ಮನಸ್ಸು ಮಾಡಬೇಕಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ವಾತಂತ್ರ್ಯ ಹೋರಾಟದ ಉತ್ಸಾಹ ಹುತಾತ್ಮರಿಗೆ ಗೌರವ ಮತ್ತು ನವ ಭಾರತ ನಿರ್ಮಾಣದ ಅವರ ಪ್ರತಿಜ್ಞೆಯನ್ನು ಅನುಭವಿಸುವಂತಹ ಮಹೋತ್ಸವ ಆಗಿರಬೇಕು.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರು ದೇಶಾಭಿಮಾನದ ಮೂಲಕ ಮತ್ತು ರಾಷ್ಟ್ರ ಪ್ರಜ್ಞೆಯನ್ನು ಹೊಂದುವ ಮೂಲಕ ನಮ್ಮ ದೇಶದ ಘನತೆಯನ್ನು ಎತ್ತಿಹಿಡಿಯಬೇಕಾಗಿದೆ. ಸಂಭ್ರಮದ ಜೊತೆಗೆ ದೇಶದ ಸವಾರ್ಂಗೀಣ ಅಭಿವೃದ್ಧಿಗೆ ಸಂಕಲ್ಪವನ್ನು ಮಾಡಬೇಕಿದೆ. ಸಂಕಲ್ಪವು ಸಂಭ್ರಮದ ರೂಪವನ್ನು ಪಡೆದಾಗ ಕೋಟ್ಯಂತರ ಜನರ ಪ್ರತಿಜ್ಞೆ ಮತ್ತು ಶಕ್ತಿಗೆ ಅರ್ಥ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬ ಭಾರತೀಯ ಪ್ರಜೆಯು ಸಹ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಾಕಾರಗೊಳಿಸಿ, ಅವರು ಬಯಸಿದ್ದ ಉತ್ತುಂಗಕ್ಕೆ ಭಾರತವನ್ನು ಏರಿಸುವ ಪ್ರಯತ್ನ ಮಾಡಬೇಕಾಗಿದೆ. ಅಮೃತ ಮಹೋತ್ಸವದ ಆಚರಣೆಯು ಐತಿಹಾಸಿಕ ಮಹೋತ್ಸವವಾಗಿ ದಾಖಲಾಗಿ ಸನಾತನ ಭಾರತದ ವೈಭವ ಮತ್ತು ಆಧುನಿಕ ಭಾರತದ ವೈಶಿಷ್ಟ್ಯವನ್ನು ಸಾಕಾರಗೊಳಿಸುವಂತಾಗಲಿ ಎಂದರು.

ಸ್ಥಳೀಯ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಲೀಸ್ ವರಿಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ ವಿಠ್ಠಲ ಕಿಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅತ್ಯುತ್ತಮ ಸೇವೆ ಸಲ್ಲಿಸಿದ ವೆನ್‍ಲಾಕ್ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.