ವಾಣಿಜ್ಯ ಜಾಹಿರಾತು

ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಯುವಕ- ಯುವತಿಯಿಬ್ಬರ ನಡುವಿ ವಾಟ್ಸ್ಯಾಪ್ ಚಾಟ್ ಆತಂಕ ಉಂಟುಮಾಡಿದ್ದು, ಇದರಿಂದಾಗಿ ಮುಂಬೈಗೆ ತೆರಳಬೇಕಿದ್ದ ವಿಮಾನ ಯಾನ ಸುಮಾರು ಮೂರು ಗಂಟೆಗಳ ಕಾಲ ರದ್ದುಗೊಂಡು ಪ್ರಯಾಣಿಕರು ಗೊಂದಲಕ್ಕೀಡಾದ ಪ್ರಕರಣ ನಡೆದಿತ್ತು. ಈ ಸಂಬಂಧ ಯುವಕ-ಯುವತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಯುವತಿ ಸಿಮ್ರಾನ್ ಟಾಮ್ (23) ಹಾಗೂ ಯುವಕ ದೀಪಯನ್ ಮಾಜಿ(23) ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 505, 1ಬಿ ಮತ್ತು ಸಿಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಘಟನೆಯ ಹಿನ್ನೆಲೆ;

ಉತ್ತರ ಪ್ರದೇಶದ ಗಾಝಿಯಾಬಾದ್ ನಿವಾಸಿಗಳಾದ ಸಿಮ್ರಾನ್ ಹಾಗೂ ದೀಪಯನ್ ಕಳೆದ ಮೂರು ದಿನಗಳ ಹಿಂದೆ ಉಡುಪಿಯ ಮಣಿಪಾಲಕ್ಕೆ ಬಂದಿದ್ದರು. ಮಣಿಪಾಲದಲ್ಲಿ ಈ ಹಿಂದೆ ವಿದ್ಯಾಭ್ಯಾಸ ಮಾಡಿದ್ದ ದೀಪಯನ್ ತನ್ನ ಸ್ನೇಹಿತೆ ಎಂದು ಹೇಳಿಕೊಂಡಿರುವ ಸಿಮ್ರಾನ್‌ರನ್ನು ಕಾಲೇಜು ತೋರಿಸುವ ಸಲುವಾಗಿ ಮಣಿಪಾಲಕ್ಕೆ ಕರೆತಂದಿದ್ದರೆನ್ನಲಾಗಿದೆ. ಕೆಲ ದಿನ ಮಣಿಪಾಲದ ಆಸುಪಾಸಿನಲ್ಲಿ ಇವರಿಬ್ಬರು ಸುತ್ತಾಡಿದ್ದು, ನಿನ್ನೆ ಬೆಳಗ್ಗೆ ಬೆಂಗಳೂರು ಮೂಲಕ ಚೆನ್ನೈಗೆ ಸಿಮ್ರಾನ್ ಹೊರಟಿದ್ದರೆ, ದೀಪಯನ್ ಮುಂಬೈ ಮೂಲಕ ವಡೋದರಕ್ಕೆ ತೆರಳಲು ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದರು.

ದೀಪಯನ್ ಹತ್ತಿದ್ದ ವಿಮಾನ ಇನ್ನೇನು ಟೇಕ್ ಆಫ್‌ಗೆ ರೆಡಿ ಆಗಿದ್ದಾಗ, ಬೋರ್ಡಿಂಗ್‌ನಲ್ಲಿದ್ದ ಸಿಮ್ರಾನ್ ಮೆಸೇಜ್ ಕಳುಹಿಸಿದ್ದು, “ಇಷ್ಟೊಂದು ಜನ ಮುಸ್ಲಿಮರ ಜೊತೆ ಹೋಗುತ್ತಿದ್ದೀಯ, ನೀನು ಬಾಂಬರಾ” ಅಂತಾ ಮೆಸೇಜ್ ನಲ್ಲಿ ಕೇಳಿದ್ದಳು. ಸಿಮ್ರಾನ್ ಮೆಸೇಜ್ ನೋಡಿದ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಗಾಬರಿಗೊಂಡು ಏರ್ಪೋರ್ಟ್ ಅಥಾರಿಟಿಗೆ ಅಲರಾಮ್ ನೀಡಿದ್ದರು. ತಕ್ಷಣ ಮುಂಬೈಗೆ ಹೊರಟಿದ್ದ ವಿಮಾನವನ್ನು ಐಸೋಲೇಷನ್ ಮಾಡಲಾಗಿತ್ತು. ಎಲ್ಲಾ ಪ್ರಯಾಣಿಕರನ್ನು ಇಳಿಸಿ ತಪಾಸಣೆ ಮಾಡಿ, ಬಳಿಕ ಮೂರು ಗಂಟೆ ತಡವಾಗಿ ವಿಮಾನ ಹೊರಟಿತ್ತು.

ಘಟನೆ ಬಗ್ಗೆ ಇಂಡಿಯೋ ವಿಮಾನ ಸಂಸ್ಥೆಯ ಮ್ಯಾನೇಜರ್ ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಲ್ಲಿ ಸಂದೇಶದಲ್ಲಿ ರವಾನೆಯಾಗಿರುವ ಅಂಶವನ್ನು ಉಲ್ಲೇಖಿಸಲಾಗಿದೆ. ಅದರಂತೆ ಪ್ರಕರಣ ದಾಖಲಿಸಿರುವ ಪೊಲೀಸರು ಯುವಕ ಹಾಗೂ ಯುವತಿಯನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.