ಈಗಾಗಲೇ ತನ್ನ ಅದ್ಭುತ ಗಾಯನದಿಂದಲೇ ಕನ್ನಡಿಗರ ಹೃದಯ ಗೆದ್ದಿರುವ ಗಾಯಕಿ ಮಂಗ್ಲಿ ಬ್ಯಾಕ್ ಟು ಬ್ಯಾಕ್ ಕನ್ನಡ ಹಾಡುಗಳಿಗೆ ಧ್ವನಿಯಾಗುತ್ತಿದ್ದಾರೆ. ಇದೀಗ ಮಂಗ್ಲಿ ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದರ ಹಾಡಿಗೆ ಧ್ವನಿಯಾಗಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ತನ್ನದೇ ವಿಭಿನ್ನ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯಗೆದ್ದ ಗಾಯಕಿ, ಇದೇ ಮೊದಲ ಬಾರಿ ತುಳು ಜನತೆಯ ಮನಗೆಲ್ಲಲು ಸಜ್ಜಾಗಿದ್ದಾರೆ.
ಎ.ಆರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅರುಣ್ ರೈ ತೋಡಾರ್ ನಿರ್ಮಾಣದ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಬಿರ್ದ್‌ದ ಕಂಬಳ’ ಮತ್ತು ‘ಕನ್ನಡದ ವೀರ ಕಂಬಳ’ ಸಿನಿಮಾಕ್ಕೆ ಮಂಗ್ಲಿ ಧ್ವನಿಯಾಗಿದ್ದಾರೆ.
ತುಳು ಹಾಗೂ ಕನ್ನಡ ಎರಡೂ ಭಾಷೆಯಲ್ಲೂ ಮಂಗ್ಲಿ ಹಾಡು ಹಾಡಿದ್ದಾರೆ. ತುಳುವಿನ ಕೆ.ಕೆ.ಪೇಜಾವರ, ಕನ್ನಡದ ರಘು ಶಾಸ್ತ್ರಿ ಅವರ ಸಾಹಿತ್ಯಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ.
ಕನ್ನಡದಲ್ಲಿ ರಾಬರ್ಟ್ ಸಿನಿಮಾದ ಕಣ್ಣೆ ಅದರಂದಿ ಹಾಡಿನ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿಕೊಟ್ಟ ಮಂಗ್ಲಿ ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಹಾಡಿಗೆ ದನಿಯಾದರು. ನಂತರ ಪುಷ್ಪಾ ಸಿನಿಮಾದ ಕನ್ನಡದ ಡಬ್ಬಿಂಗ್ ಸಿನಿಮಾದಲ್ಲಿ ಐಟಂ ಸಾಂಗ್‌ಗೂ ಮಂಗ್ಲಿ ಹಾಡಿದ್ದರು. ಮಂಗ್ಲಿ ಹಾಡಿರುವ ಅಷ್ಟೂ ಕನ್ನಡ ಹಾಡುಗಳು ಸೂಪರ್‌ಹಿಟ್ ಆಗಿವೆ.
ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ಕುರಿತು ತುಳು ಮತ್ತು ಕನ್ನಡದಲ್ಲಿ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ಸಂಪೂರ್ಣ ಕರಾವಳಿಯ ಜಾನಪದ ಕಲೆ ಕಂಬಳದ ಕುರಿತಾಗಿರದ್ದು, ಚಿತ್ರೀಕರಣದ ವೇಳೆ ಸುಮಾರು 20 ಜೊತೆ ಕೋಣ ಹಾಗೂ 500ಕ್ಕೂ ಹೆಚ್ಚಿನ ಕಲಾವಿದರೊಂದಿಗೆ ಚಿತ್ರೀಕರಣ ಮಾಡಲಾಗಿದೆ.