ದಕ್ಷಿಣ ಕನ್ನಡ: ದೇಶದಲ್ಲಿ ಬೇಸಿಗೆ ಆರಂಭವಾಗಿದ್ದು ಬಿಸಿಲಿನ ಬೇಗೆಯಿಂದ ಜನ ತತ್ತರಿಸಿ ಹೋಗ್ತಿದ್ದಾರೆ. ಬೇಸಿಗೆ ಆರಂಭದಲ್ಲಿಯೇ ತಾಪಮಾನ ಹೆಚ್ಚಾಗಿದ್ದು, ಅದರಲ್ಲೂ ಕರಾವಳಿ ಭಾಗದ ಜನ ಬಿಸಿಲಿನ ಝಳಕ್ಕೆ ಪರಿತಪಿಸಿ ಹೋಗಿದ್ದಾರೆ. ದೇಶದಲ್ಲಿಯೇ ಗರಿಷ್ಠ ತಾಪಮಾನ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿದೆ.
ದಕ್ಷಿಣ ಕನ್ನಡದ ಕಡಬ ಮತ್ತು ಉಪ್ಪಿನಂಗಡಿಯಲ್ಲಿ ತಾಪಮಾನ 40.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಬುಧವಾರ, ಗುರುವಾರಕ್ಕೆ ಹೋಲಿಸಿದರೆ ಇಂದು ತಾಪಮಾನ ಕೊಂಚ ಮಟ್ಟಿಗೆ ಕಡಿಮೆ ಇತ್ತು. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನ 38 ಡಿಗ್ರಿ ಸೆಲ್ಶಿಯಸ್‍ನಿಂದ 40 ಡಿಗ್ರಿ ಸೆಲ್ಶಿಯಸ್ ದಾಖಲಾಗುತ್ತಿದೆ.
ದಕ್ಷಿಣ ಕನ್ನಡದ ಪುತ್ತೂರು, ಬೆಳ್ತಂಗಡಿ ಮತ್ತು ಕಾರವಾರದಲ್ಲಿ 39 ಡಿಗ್ರಿಗೂ ಹೆಚ್ಚು ಉಷ್ಣಾಂಶ ಕಂಡುಬಂದಿದೆ. ಕರಾವಳಿ ಕರ್ನಾಟಕದಲ್ಲಿ ಮಾರ್ಚ್ 15ರವರೆಗೂ ಸಾಮಾನ್ಯಕ್ಕಿಂತ ಅಧಿಕ ಉಷ್ಣಾಂಶ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ತಾಪಮಾನ ಮಾಮೂಲಿಗಿನಿಂದ 4 ರಿಂದ 6 ಡಿಗ್ರಿ ಸೆಲ್ಶಿಯಸ್ ಹೆಚ್ಚು ಇರಲಿದೆ. ಆದರೆ ಮಾರ್ಚ್ 16 ರಿಂದ ಮಾರ್ಚ್ 22ರವರೆಗೂ ಕರಾವಳಿ ಕರ್ನಾಟಕದಲ್ಲಿ ಕಡಿಮೆ ತಾಪಮಾನ ದಾಖಲಾಗಲಿದೆ. ಆದರೆ ಇದು ತಾತ್ಕಾಲಿಕವಾಗಿದ್ದು ಏಪ್ರಿಲ್ ಹೊತ್ತಿಗೆ ಬಿಸಿ ಗಾಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.
ಮಾರ್ಚ್ ತಿಂಗಳಲ್ಲಿ ಹೆಚ್ಚು ಉಷ್ಣಾಂಶ ಬಂದಿರುವುದು ಬಹಳ ಅಪರೂಪ. ಇದು ತಾತ್ಕಾಲಿಕವಾಗಿದ್ದು ಮುಂದಿನ ನಾಲ್ಕು ಹಾಗೂ ಐದನೇ ದಿನ ಕೆಲವೆಡೆ ಮಳೆಯಾಗಬಹುದು. ಮಾ.14, 15 ರಂದು ಮೂರು ಜಿಲ್ಲೆಗಳು ಅಂದರೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಹಗಲು ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್‌ನಲ್ಲಿ ಇನ್ನೂ ಹೆಚ್ಚು ಉಷ್ಣಾಂಶ ದಾಖಲಾಗಲಿದೆ. ಎಂದು ಹವಾಮಾನ ವಿಜ್ಞಾನಿ ಪ್ರಸಾದ್ ತಿಳಿಸಿದ್ದಾರೆ.