ಅದು ಸ್ವಚ್ಛ, ತಿಳಿಯಾದ ನೀರು ಹರಿಯುವ ಸುಂದರವಾದ ನದಿ. ನದಿಯ ನೀರು ಎಷ್ಟು ಸ್ವಚ್ಛವಾಗಿದೆಯೆಂದರೆ, ನದಿಯ ತಳದಲ್ಲಿ ಇರುವ ಕಲ್ಲು, ಹಸಿರು ಗಿಡಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಈ ನದಿಯಲ್ಲಿ ಸಾಗುವ ಬೋಟ್ ನೀರಲ್ಲಿ ಸಾಗದೆ, ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ಸದ್ಯ ಈ ನದಿಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಮೇಘಾಲಯದ ಉಮನ್ ಗೋತ್’ನ ಪಾರದರ್ಶಕ ನದಿಯ ಸುಂದರ ಚಿತ್ರವನ್ನು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ತನ್ನ ಟ್ವಿಟರ್ ಪೇಜ್’ನಲ್ಲಿ ಶೇರ್ ಮಾಡಿದೆ.
ನದಿಯಲ್ಲಿ ಬೋಟ್’ನಲ್ಲಿ ಐವರು ಸಂಚರಿಸುತ್ತಿದ್ದು, ಸ್ವಚ್ಛವಾಗಿದ್ದು, ಸ್ವಚ್ಛಂದವಾಗಿ ಹರಿಯುತ್ತಿರುವ ನದಿಯ ಫೋಟೋ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.
‘ಎಲ್ಲಾ ನದಿಗಳು ಇಷ್ಟು ಸುಂದರವಾಗಿದ್ದರೆ ಎಷ್ಟು ಚಂದ. ನದಿಯನ್ನು ಇಷ್ಟು ಸ್ವಚ್ಛವಾಗಿಟ್ಟುಕೊಂಡಿರುವ ಮೇಘಾಲಯದ ಜನರಿಗೆ ಧನ್ಯವಾದ’ ಎಂದು ಸಚಿವಾಲಯ ಟ್ವೀಟ್ ಮಾಡಿದೆ. ಉಮನ್ ಗೋತ್ ನದಿಯ ಫೋಟೋ ಶೇರ್ ಮಾಡಿರುವ ಕೆಲವೇ ಗಂಟೆಗಳಲ್ಲಿ ಫೋಟೋಗೆ 29,000 ಲೈಕ್ಸ್ ಬಂದಿದ್ದು, ಮೂರು ಸಾವಿರಕ್ಕೂ ಅಧಿಕ ಮಂದಿ ಈ ಫೋಟೋವನ್ನು ರಿ ಟ್ವೀಟ್ ಮಾಡಿದ್ದಾರೆ.
One of the cleanest rivers in the world. It is in India. River Umngot, 100 Kms from Shillong, in Meghalaya state. It seems as if the boat is in air; water is so clean and transparent. Wish all our rivers were as clean. Hats off to the people of Meghalaya. pic.twitter.com/pvVsSdrGQE
— Ministry of Jal Shakti 🇮🇳 #AmritMahotsav (@MoJSDoWRRDGR) November 16, 2021
ಗಾಳಿಯಲ್ಲಿ ತೇಲುವ ಉಮನ್ ಗೋತ್ ನದಿ..!
ಮೇಘಾಲಯ ರಾಜ್ಯದ ಶಿಲ್ಲಾಂಗ್‌ನಿಂದ 100 ಕಿಮೀ ದೂರದಲ್ಲಿರುವ ಉಮನ್ ಗೋತ್ ನದಿ, ವಿಶ್ವದ ಅತ್ಯಂತ ಸ್ವಚ್ಛ ನದಿಗಳಲ್ಲಿ ಒಂದಾಗಿದೆ. ಶಿಲ್ಲಾಂಗ್‌ನಿಂದ 45 ಕಿ.ಮೀ. ದೂರದಲ್ಲಿ, ಭಾರತ ಮತ್ತು ಬಾಂಗ್ಲಾದೇಶದ ಗಡಿ ಭಾಗದಲ್ಲಿ ಪೂರ್ವಿ ಅಯಂತಿಯ ಹಿಲ್ಸ್ ಜಿಲ್ಲೆಯ ದಾವಕಿ ಪ್ರಾಂತ್ಯದಲ್ಲಿ ಈ ನದಿ ಹರಿಯುತ್ತದೆ. ಜನರು ಇದನ್ನು ಪರ್ವತಗಳಲ್ಲಿ ಅಡಗಿರುವ ಸ್ವರ್ಗವೆಂದೇ ಕರೆಯುತ್ತಾರೆ.
ದಾವಕಿ, ದಾರಂಗ್ ಮತ್ತು ಶೆನಾಂಗ್ ಡೆಂಗ್ ಎಂಬ ಮೂರು ಗ್ರಾಮಗಳಲ್ಲಿ ಉಮನ್ ಗೋತ್ ನದಿ ಹರಿಯುತ್ತದೆ. ಪ್ರತಿ ಗ್ರಾಮದ ಜನರು ಆ ನದಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತಾರೆ. ಗ್ರಾಮದ ಪ್ರತಿಯೊಂದೂ ಮನೆಯಿಂದ ಒಬ್ಬೊಬ್ಬರು ಬಂದು ನದಿಯನ್ನು ಸ್ವಚ್ಛ ಮಾಡುತ್ತಾರೆ.
ಈ ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. ಎಲ್ಲರೂ ಸೇರಿ ನದಿಯ ಸ್ವಚ್ಛತಾ ಕಾರ್ಯ ನೆರವೇರಿಸುತ್ತಾರೆ. ಒಂದು ವೇಳೆ ಯಾರಾದರೂ ಕಸ, ಕಡ್ಡಿ ಹಾಕಿ ಗಲೀಜು ಮಾಡಿದರೆ ಅಂಥವರಿಗೆ 5000 ರೂ. ದಂಡ ವಿಧಿಸಲಾಗುತ್ತದೆ. ಈ ಸುಂದರವಾದ ಗ್ರಾಮದಲ್ಲಿರೋ ನದಿ ನೋಡಲು ನೋಡಲು ನವೆಂಬರ್‌ನಿಂದ ಏಪ್ರಿಲ್‌ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.