ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ದೈವ,– ದೇವರುಗಳ ಮೊರೆಹೋಗುವುದು ಸಹಜ. ಅದರಂತೆ ಕಳೆದ ಚುನಾವಣಾ ಪೂರ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹರಕೆ ಹೊತ್ತಿದ್ದ ಶಾಸಕ ಹರೀಶ್ ಪೂಂಜಾ ಇದೀಗ ನವ ಗುಳಿಗ ದೈವಗಳಿಗೆ ಕೋಲ ಸೇವೆ ನೀಡಿ ಹರಕೆ ತೀರಿಸಿದ್ದಾರೆ.
ದಕ್ಷಿಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವಗುಳಿಗರಿಗೆ ಕೋಲ ನೀಡುವೆನೆಂದು ಶಾಸಕ ಕಳೆದ ಚುನಾವಣಾ ಪೂರ್ವದಲ್ಲಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕೋಲ ಸೇವೆಯನ್ನು ಮಾಡಿಸಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರಕ್ಕೆ ಆಗಮಿಸಿದ ಕೋಲ ಸೇವೆಯನ್ನು ನೀಡಿದ್ದಾರೆ.
ತುಳುನಾಡಿನಲ್ಲಿ ನವಗುಳಿಗ ದೈವಗಳು ನೆಲೆಯಾದ ಏಕೈಕ ಕ್ಷೇತ್ರ ಬರ್ಕಜೆ ಕ್ಷೇತ್ರದಲ್ಲಿ ಹರಕೆ ಹೊತ್ತರೆ ಭಕ್ತರ ಮನಸಂಕಲ್ಪ ಈಡೇರುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಹರೀಶ್ ಪೂಂಜಾ ಅವರು ಇಲ್ಲಿ ಹರಕೆ ಹೊತ್ತಿದ್ದರು. ಇದೀಗ ನವಗುಳಿಗರಿಗೆ ಕೋಲ ನೀಡಿದ್ದು, ಈ ಸಂದರ್ಭದಲ್ಲಿದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನವಗುಳಿಗ ದೈವಗಳ ಕೋಲ ಸೇವೆಯನ್ನು ಕಣ್ತುಂಬಿಕೊಂಡರು.
ನವಗುಳಿಗ ದೈವಗಳಿಗೆ ವಿಶೇಷವಾಗಿ ಗಗ್ಗರ ಸೇವೆ ನಡೆಯಿತು. ಕ್ಷೇತ್ರಕ್ಕೆ ಅಗಮಿಸಿದ ಶಾಸಕ ಹರೀಶ್ ಪೂಂಜರನ್ನು ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ ಅವರು ಕ್ಷೇತ್ರದ ಪರವಾಗಿ ಗೌರವಿಸಿದರು.