ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 37 ಮತ್ತು ಉಡುಪಿ ಜಿಲ್ಲೆಯ 5 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ತುಳು ಭಾಷಾ ಶಿಕ್ಷಣ ನೀಡಲಾಗುತ್ತಿದ್ದು, ಶಿಕ್ಷಣ ನೀಡುವ ಶಿಕ್ಷಕರಿಗೆ 3000 ರೂಪಾಯಿ ಗೌರವಧನವು ಹಲವು ವರ್ಷಗಳಿಂದ ಬಾಕಿಯಿದೆ. ಆ ಗೌರವಧನವನ್ನು ಬಾಕಿ ಸಮೇತ ಶಿಕ್ಷಕರಿಗೆ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮನವಿ ಸಲ್ಲಿಸಿದ್ದಾರೆ.
2017ರಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ತೃತೀಯ ಭಾಷೆಯಾಗಿ ತುಳು ಭಾಷೆಯನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಲಾಯಿತು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ 37 ಮತ್ತು ಉಡುಪಿ ಜಿಲ್ಲೆಯ 5 ಶಾಲೆಗಳು ಸೇರಿ ಒಟ್ಟು 43 ಶಿಕ್ಷಕರು ತುಳುಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ಪ್ರಸ್ತುತ ದ.ಕ ಜಿಲ್ಲೆಯಲ್ಲಿ 8ರಿಂದ 10ನೇ ತರಗತಿಯವರಿಗೆ ತುಳು ಭಾಷೆಯನ್ನು ಕಲಿಸಲಾಗುತ್ತಿದೆ. ಈ ಶಿಕ್ಷಕರಿಗೆ 3,000 ಗೌರವಧನವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ನೀಡಲಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಇವರಿಗೆ ಗೌರವಧನ ಸಂದಾಯವಾಗಿಲ್ಲ.
ಹಾಗಾಗಿ ಇವರ ಗೌರವಧನವನ್ನು ಬಾಕಿ ಸಮೇತ ಪಾವತಿಸುವಂತೆ ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.