ಮೂಡುಬಿದಿರೆ: ಭಾರತೀಯ ಜೇಸಿಸ್‌ನ ಹಲವು ಹುದ್ದೆಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡ ಉದ್ಯಮಿ ಆಶಿತ್ ಕುಮಾರ್ (51) ಗುರುಪುರದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ಕೇಳದ ಪೇಟೆಯವರಾಗಿದ್ದ ಆಶಿತ್ ಕುಮಾರ್ ಮೂಡುಬಿದಿರೆಯಲ್ಲಿ ಮಹಾವೀರ ಎಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿದ್ದರು. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಬಳಿಕ ಉದ್ಯಮವನ್ನು ಮುಚ್ಚಿ ಮಂಗಳೂರಿನಲ್ಲಿ ಖಾಸಗಿ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಕ್ಕೆ ಸೇರ್ಪಡೆ ಗೊಂಡು ಮಂಗಳೂರಿನಲ್ಲಿ ನೆಲೆಸಿದ್ದರು.
ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮೃತ ಆಶಿತ್ ಮೂಡುಬಿದಿರೆ ತ್ರಿಭುವನ್ ಜೇಸಿಐ ಅಧ್ಯಕ್ಷರಾಗಿ, ವಲಯ 15ರ ವಲಯಾಧಿಕಾರಿ, ವಲಯಾಧ್ಯಕ್ಷರಾಗಿ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದರು. ಕೇಳದಪೇಟೆ ಬಸದಿಯ ಜೀರ್ಣೋದ್ಧಾರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದ ಆಶಿತ್ ನಿನ್ನೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.