ವಾಣಿಜ್ಯ ಜಾಹಿರಾತು

ತುಳುಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ‘ ಮಗನೇ ಮಹಿಷ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನ ಹೆಸರಾಂತ ಸಂಗೀತ ನಿರ್ದೇಶಕರೋರ್ವರು ಕೋಸ್ಟಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ‘ಮುಂಗಾರು ಮಳೆ’ ಸಿನಿಮಾದಲ್ಲಿ ಹಿಟ್ ಹಾಡುಗಳನ್ನು ನೀಡಿ ಜನಪ್ರಿಯತೆ ಪಡೆದುಕೊಂಡ ಸಂಗೀತ ನಿರ್ದೇಶಕ ಮನೋ ಮೂರ್ತಿ ಅವರು ಇದೀಗ ‘ಮಗನೇ ಮಹಿಷ’ ಸಿನಿಮಾದ ಮೂಲಕ ಪ್ರಥಮ ಬಾರಿಗೆ ಕೋಸ್ಟಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

ತುಳುವಿನ ಸೂಪರ್ ಹಿಟ್ ಚಿತ್ರ ‘ಚಾಲಿಪೋಲಿಲು’ ನಿರ್ದೇಶನದ ಮೂಲಕ ತುಳುಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ವೀರೇಂದ್ರ ಶೆಟ್ಟಿ  ಕಾವೂರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಎರಡನೇ ಚಿತ್ರ ‘ಮಗನೇ ಮಹಿಷ’ ದ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ವೀರೇಂದ್ರ ಶೆಟ್ಟಿ, ಸ್ಯಾಂಡಲ್ ವುಡ್ ನ ಮೆಲೋಡಿ ಮಾಂತ್ರಿಕ ಎಂದೇ ಖ್ಯಾತರಾಗಿರುವ, ಹಿಟ್ ಸಂಗೀತಗಳ ನಿರ್ದೇಶಕ ಮನೋಮೂರ್ತಿ ಅವರನ್ನು ತುಳುಚಿತ್ರರಂಗಕ್ಕೆ ಕರೆತಂದಿದ್ದಾರೆ.

‘ಚಾಲಿಪೋಲಿಲು’ ತುಳು ಸಿನಿಮಾದ ಬಳಿಕ ಕನ್ನಡದಲ್ಲಿ ‘ಸವರ್ಣ ದೀರ್ಘ ಸಂಧಿ’ ಸಿನಿಮಾ ಮಾಡಿದ್ದೆ. ಆ ಸಿನಿಮಾಕ್ಕೆ ಮನೋಮೂರ್ತಿ ಸರ್ ಸಂಗೀತ ನೀಡಿದ್ದರು. ಅವರು ನನಗೆ ಬಹಳ ಆತ್ಮೀಯರು. ಈ ಸಂದರ್ಭದಲ್ಲಿ ಅವರ ಬಳಿ ಮಗನೇ ಮಹಿಷ ಸಿನಿಮಾಕ್ಕೆ ಸಂಗೀತ ನಿರ್ದೇಶಕರಾಗಿ ತಮ್ಮ ಅಸಿಸ್ಟೆಂಟ್ ಯಾರನ್ನಾದರೂ ಸೂಚಿಸುವಂತೆ ಕೇಳಿಕೊಂಡಿದ್ದೆ. ಆದರೆ ಅವರು ಸ್ವಯಂಆಸಕ್ತಿಯಿಂದ ತಾವೇ ಸಂಗೀತ ನಿರ್ದೇಶನ ಮಾಡುತ್ತೇನೆ. ನಿನಗೋಸ್ಕರ ತುಳುಚಿತ್ರರಂಗಕ್ಕೆ ಬರುತ್ತೇನೆ ಎಂದರು ಎಂಬುದಾಗಿ ಚಿತ್ರದ ನಿರ್ದೇಶಕ ವಿರೇಂದ್ರ ಶೆಟ್ಟಿ ಹೇಳಿದ್ದಾರೆ.

ಚಿತ್ರದ ಫಸ್ಟ್ ಲುಕ್ ಪೋಸ್ಟರ್:

ಮೆಲೋಡಿ ಹಾಡುಗಳಿಗೆ ಖ್ಯಾತರಾಗಿರುವ ಮನೋ ಮೂರ್ತಿಯವರ ಬತ್ತಳಿಕೆಯಿಂದ ಮಗನೇ ಮಹಿಷ ಸಿನಿಮಾದಲ್ಲೂ ಒಂದು ಮೆಲೋಡಿ ಸಾಂಗ್ ಮೂಡಿಬಂದಿದೆ. ಸಿನಿಮಾದಲ್ಲಿ 4 ಹಾಡುಗಳಿವೆ . ಮೆಲೋಡಿ, ಕ್ಲಾಸಿಕಲ್, ಪಾರ್ಟಿ ಸಾಂಗ್ ಮತ್ತು ಅಯಗಿರಿ ನಂದಿನಿ ರಿಮಿಕ್ಸ್ ಸಾಂಗ್ ಕೂಡ ಇದೆ. ಮನೋಮೂರ್ತಿಯವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ಮಾರ್ಚ್ 16 ಕ್ಕೆ ಹಾಡುಗಳು ಬಿಡುಗಡೆಯಾಗಲಿದೆ. ಏ.29ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಸೆನ್ಸರ್ ಕೂಡ ಆಗಿದ್ದು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇವೆ ಎಂದಿದ್ದಾರೆ ಚಿತ್ರದ ನಿರ್ದೇಶಕರು.

ಖ್ಯಾತ ಹಿನ್ನೆಲೆ ಗಾಯಕಿ ಅನುರಾಧ ಭಟ್,  ಆಕಾಂಕ್ಷಾ ಬಾದಾಮಿ, ಹೊಸ ಪರಿಚಯ ಪ್ರಶಾಂತ್ ಕಂಕನಾಡಿ ಹಾಡಿಗೆ ಧ್ವನಿಯಾಗಿದ್ದಾರೆ. ‘ನನ್ನ ಪ್ರೀತಿಯ ಹುಡುಗಿ’ ಸಿನಿಮಾದಲ್ಲಿ ಕಾರ್ ಕಾರ್ ಎಲ್ನೋಡಿ ಕಾರ್ ಹಾಡು ಖ್ಯಾತಿಯ ಬಿ ಜಯಶ್ರೀ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ತುಳು ಹಾಡು ಹಾಡಿರುವುದು ಮತ್ತೊಂದು ವಿಶೇಷ.  ಟೈಟಲ್ ಸಾಂಗ್ ನ್ನು ರಕ್ಷಣ್ ಮಾಡೂರು ಹಾಡಿದ್ದಾರೆ. ನಿರ್ದೇಶನ-ಕಥೆ- ಜೊತೆಗೆ ನಿರ್ಮಾಣದ ಹೊಣೆ ಹೊತ್ತಿರುವ ವಿರೇಂದ್ರ ಶೆಟ್ಟಿ ಒಂದು ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ . ಇವರೊಂದಿಗೆ ರಕ್ಷಣ್ ಮಾಡೂರು ಮತ್ತು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಸಾಹಿತ್ಯವಿದೆ.

ಈ ಸಿನಿಮಾದ ಹಾಡಿನ ಮತ್ತೊಂದು ವಿಶೇಷತೆ ಅಂದರೆ ಲೈವ್ ಮ್ಯೂಸಿಕ್. ಲೈವ್ ಮ್ಯೂಸಿಕ್ ಬಳಸಿ ಮಾಡಿದ ಮೊದಲ ತುಳುಚಿತ್ರ ಎಂಬ ಖ್ಯಾತಿಯೂ ಮಗನೇ ಮಹಿಷಾ ಸಿನಿಮಾಕ್ಕೆ ಸೇರಿದೆ.
ಇನ್ನು ಸಿನಿಮಾದ ಬಗ್ಗೆ ಹೇಳಬೇಕೆಂದರೆ ಅತ್ಯುನ್ನತ ಗುಣಮಟ್ಟದಲ್ಲಿ ಸಿನಿಮಾ ಮೂಡಿಬಂದಿದೆ. ‘ಚಾಲಿಪೋಲಿಲು’ ಸಿನಿಮಾಕ್ಕೆ ಹೋಲಿಸಿದರೆ ಡಬಲ್ ಕಾಮಿಡಿಯ ಜೊತೆಗೆ ಸಂಪೂರ್ಣ ಮನರಂಜನೆ ಸಿಗಲಿದೆ. ಆರಂಭದಿಂದ ಕೊನೆಯವರೆಗೂ ಕಾಮಿಡಿ ಇದೆ. ಜನರು ಎಂಜಾಯ್ ಮಾಡೋದು ಖಂಡಿತ ಎಂದಿದ್ದಾರೆ ಚಿತ್ರದ ನಿರ್ದೇಶಕರು.

ತುಳುಚಿತ್ರರಂಗದ ಸ್ಟಾರ್ ನಟರಾದ ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಖ್ಯಪಾತ್ರದಲ್ಲಿದ್ದರೆ, ನಾಯಕಿಯಾಗಿ ಜ್ಯೋತಿ ರೈ,  ಉಳಿದಂತೆ ತುಳುಚಿತ್ರರಂಗದ ಬಹುತೇಕ ಎಲ್ಲಾ ಹೆಸರಾಂತ ಕಲಾವಿದರು ತಾರಾಗಣದಲ್ಲಿದ್ದಾರೆ.
ಈ ದಿಗ್ಗಜ ಕಲಾವಿದರು ಮತ್ತೊಮ್ಮೆ ಒಟ್ಟಾಗಿ ನಟಿಸುತ್ತಿರುವ ಚಿತ್ರ ಇದು ಎನ್ನುವುದು ಮತ್ತೊಂದು ವಿಶೇಷತೆಯಾಗಿದೆ. ಚಾಲಿಪೊಲೀಲು ಸಿನಿಮಾ ತೆರೆಕಂಡು 7 ವರ್ಷಗಳ ಬಳಿಕ ಈ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಮತ್ತೊಂದು ಚಿತ್ರ ಇದಾಗಿದೆ. ಚಿತ್ರಕ್ಕೆ ತೆಲುಗು ಚಿತ್ರರಂಗದ ಮಹಿ ಬಿ ರೆಡ್ಡಿ ಪಂಡುಗುಲ ಛಾಯಾಗ್ರಹಣವಿದೆ.

ಕ್ವಾಲಿಟಿ ಮ್ಯೂಸಿಕ್ ಈ ಸಿನಿಮಾದಲ್ಲಿದ್ದು, ಇದು ಮನೋಮೂರ್ತಿ ಸರ್ ನಮಗೆ ಕೊಟ್ಟ ಗಿಫ್ಟ್ ಎಂದುಕೊಳ್ಳುತ್ತೇನೆ. ಸಿನಿಮಾವಂತೂ ತುಂಬಾ ಚೆನ್ನಾಗಿ ಮೂಡಿಬಂದಿದ್ದು , ಫುಲ್ ಮನರಂಜನೆ ಇದೆ ಎಂದಿದ್ದಾರೆ ಚಿತ್ರದ ನಿರ್ದೇಶಕರಾದ ವಿರೇಂದ್ರ ಶೆಟ್ಟಿ.

ಈ ಸಿನಿಮಾದಲ್ಲಿ ನಿರ್ದೇಶಕರೇ ಹೇಳುವಂತೆ ಕಾಮಿಡಿಯ ಡಬಲ್ ಧಮಾಕಾ ಇರಲಿದೆ. ಇದರೊಂದಿಗೆ ಮನೋಮೂರ್ತಿ ಅವರ ಸಂಗೀತವಿರುವುದರಿಂದ ಚಿತ್ರ ಮ್ಯೂಸಿಕಲ್ ಹಿಟ್ ಕೂಡ ನೀಡಬಹುದು ಎನ್ನುವ ನಿರೀಕ್ಷೆಯೂ ಇದೆ. ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್.

ಮತ್ತೆ ತುಳುವಿನತ್ತ ವೀರು ಶೆಟ್ಟಿ

 

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.