ಸದ್ಯ ಕೋಸ್ಟಲ್‌ವುಡ್‌ನಲ್ಲಿ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ‘ಗೌಜಿ ಗಮ್ಮತ್’ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದೆ, ಸದ್ಯ ಚಿತ್ರತಂಡ ಮಕರ ಸಂಕ್ರಮಣದಂದು ಗೌಜಿ ಗಮ್ಮತ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ.
ಮೋವಿನ್ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಗೌಜಿ ಗಮ್ಮತ್’ ಸಿನಿಮಾದ ಮೋಷನ್ ಪೋಸ್ಟರ್ ಗೆ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಕರ್ಣ ಉದ್ಯಾವರ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಉಡುಪಿಯ ಸ್ವಾತಿ ಶೆಟ್ಟಿ ಬಣ್ಣದ ಬದುಕಿಗೆ ಎಂಟ್ರಿಕೊಟ್ಟಿದ್ದಾರೆ.
‘ಗೌಜಿ ಗಮ್ಮತ್’ ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು ತುಳುನಾಡ ಹಾಸ್ಯ ದಿಗ್ಗಜರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರು ಪ್ರೇಕ್ಷಕರಿಗೆ ನಗುವಿನ ಔತಣ ಬಡಿಸಲು ಸಿದ್ದರಾಗಿದ್ದಾರೆ. ಉಳಿದಂತೆ ಚಂದ್ರಹಾಸ ಶೆಟ್ಟಿ ಮಾಣಿ, ಅಶ್ವಥ್ ಶೆಟ್ಟಿ, ಜಯಶೀಲ ಮರೋಳಿ, ಸುಜಾತ ಶಕ್ತಿನಗರ, ವನಿತಾ ಸುವರ್ಣ, ರಾಧಿಕ ಭಟ್, ಹರೀಶ್ ಚಂದ್ರ ಪೆರಾಡಿ, ಪ್ರಭಾಕರ್ ಬ್ರಹ್ಮಾವರ, ಕಿಶೋರ್ ಶೆಟ್ಟಿ ಪಿಲಾರ್, ಹರೀಶ್ ಪೂಜಾರಿ ಕಡ್ತಲ, ಅನುಷಾ ಶೆಟ್ಟಿ, ಲೋಕೇಶ್ ಮಾಣಿಲ, ಪ್ರಭಾಕರ ಆಚಾರ್ಯ ಮೂಡುಬೆಳ್ಳೆ, ಚಿತ್ರಿತಾ ದೇವಾಡಿಗ ಹಳೆಯಂಗಡಿ, ವಿಕ್ಕಿ ರಾವ್ ಮಿರ್ಚಿ, ಸಂದೇಶ್ ದೇವಾಡಿಗ, ಶಿವರಾಮ್ ವಿಟ್ಲ ಸೇರಿದಂತೆ ಇನ್ನೂ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.
ಒಂದು ಸುಂದರ ಕೌಟುಂಬಿಕ ಹಾಸ್ಯವನ್ನಾಧಾರಿತ ಕಥಾ ಹಂದರವೇ ‘ಗೌಜಿ ಗಮ್ಮತ್’. ಶೀರ್ಷಿಕೆಗೆ ತಕ್ಕಂತೆ ಚಿತ್ರದ ಪ್ರತಿಯೊಂದು ಹಂತದಲ್ಲೂ ಪ್ರೇಕ್ಷಕರಿಗೆ ವಿಭಿನ್ನ ರೀತಿಯಲ್ಲಿ ಮನರಂಜನೆ ನೀಡುವ ಚಿತ್ರಕಥೆಯೊಂದಿಗೆ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ.
ಚಿತ್ರಕ್ಕೆ ಈ ಹಿಂದೆ ತುಳು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಇರುವ ಮಣಿ ಎಜೆ ಕಾರ್ತಿಕೇಯನ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದು, ಹಲವಾರು ಕನ್ನಡ, ತುಳು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಸಂದೀಪ್ ಬೆದ್ರ ಮೊದಲ ಬಾರಿಗೆ ಸಿನಿಮಾದ ಚಿತ್ರಕತೆ – ಸಂಭಾಷಣೆಯನ್ನು ಬರೆದಿದ್ದಾರೆ ಹಾಗೂ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನೂ ‘ಗೌಜಿ ಗಮ್ಮತ್’ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ತುಷಾರ್ ಸುರತ್ಕಲ್, ನಿರ್ದೇಶನ ತಂಡದಲ್ಲಿ ರಾಮದಾಸ್ ಸಸಿಹಿತ್ಲು, ಕರ್ಣ ಉದ್ಯಾವರ, ಗೌರವ್ ರೈ, ಆರ್ಟ್ ಡಿಪಾರ್ಟ್ಮೆಂಟ್ – ಕೃಷ್ಣ, ಛಾಯಾಗ್ರಹಣ ವಿ ರಾಮಾಂಜನೇಯ, ಛಾಯಾಗ್ರಹಣ ಸಹಾಯ – ವೇಣು, ಸಂಕಲನ ಮೇವಿನ್ ಜೊಯಿಲ್ ಪಿಂಟೊ, ಮೇಕಪ್ – ಮಂಜುನಾಥ್ ಶೆಟ್ಟಿಗಾರ್ ಮುಂಬೈ, ಪೊಸ್ಟರ್ ಡಿಸೈನ್ – ಎಡಿಟಿವ್ ಕ್ರಿಯೇಷನ್, ಪ್ರೊಡಕ್ಷನ್‌ನಲ್ಲಿ ಪ್ರಮೋದ್ ಅಶ್ವತ್ಥಪುರ, ಅವಿನಾಶ್ ವಿಟ್ಲ, ಸ್ಥಿರ ಚಿತ್ರೀಕರಣ ಹುಲುಗಪ್ಪ ಬಳ್ಳಾರಿ, ಹೀಗೆ ನುರಿತ ತಂತ್ರಜ್ಞರು ಈ ಸಿನಿಮಾ ತಂಡದಲ್ಲಿದ್ದಾರೆ.
ಇನ್ನು ಚಿತ್ರದ ಹಾಡುಗಳಿಗೆ ಕಿಶೋರ್ ಮೂಡಬಿದ್ರೆ, ಮಯೂರ್ ನಾಯ್ಗ, ಲೋಕು ಕುಡ್ಲ, ಸಂದೀಪ್ ಬೆದ್ರ, ಸಾಹಿತ್ಯವಿದ್ದು, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ “ಸ್ಯಾಮೂವಲ್ ಎಬಿ” ವಹಿಸಿಕೊಂಡಿದ್ದಾರೆ. ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ 32 ಮಿಲಿಯನ್ ವೀಕ್ಷಣೆ ಪಡೆದುಕೊಂಡು ವೈರಲ್ ಆಗಿದ್ದ ‘ಕಕ್ಷಿ ಅಮ್ಮಿನಿಪಿಲ್ಲ’ ಮಲಯಾಳಂ ಸಿನಿಮಾದ ಹಾಡು ಸ್ಯಾಮ್ ಅವರ ಕೊಡುಗೆಯಾಗಿದ್ದು , ಇದೀಗ ‘ಗೌಜಿ ಗಮ್ಮತ್ತ್’ ಸಿನಿಮಾದಲ್ಲೂ ತನ್ನದೇ ಶೈಲಿಯಲ್ಲಿ ಸಂಗೀತದ ಮೋಡಿ ಮಾಡಿ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ.. ಇನ್ನೂ ಈ ಚಿತ್ರದ ತುಂಬ ಹಾಸ್ಯ ತುಂಬಿದ್ದು, ಅದರ ಜೊತೆಗೆ ಉತ್ತಮ ಸಂದೇಶವನ್ನು ನೀಡುವ ಉದ್ದೇಶದಿಂದ ಎಲ್ಲೂ ರಾಜಿ ಮಾಡಿಕೊಳ್ಳದೇ ಅಚ್ಚುಕಟ್ಟಾಗಿ ಸಿನಿಮಾ ನಿರ್ಮಿಸುತ್ತಿದ್ದೇವೆ.. ಉಡುಪಿ, ಮಂಗಳೂರು ಪರಿಸರದಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿದ್ದು, ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎಂದು ನಿರ್ಮಾಪಕರಾದ ಮೋಹನ್ ಭಟ್ಕಳ ಮತ್ತು ವಿನಾಯಕ್ ತೀರ್ಥಹಳ್ಳಿ ಅವರು ಮಾಹಿತಿ ನೀಡಿದ್ದಾರೆ.. ಇನ್ನೂ ಶೀಘ್ರದಲ್ಲೇ ‘ಗೌಜಿ ಗಮ್ಮತ್ತ್’ ಸಿನಿಮಾ ಬೆಳ್ಳಿತೆರೆಗೆ ಬರಲು ಸಂಪೂರ್ಣ ಸಜ್ಜಾಗಿದೆ.