ಆಕಾಶ ಎಂದಿಗೂ ಕೌತುಕಗಳ ತಾಣ. ಪ್ರತೀದಿನ ಪ್ರತಿಕ್ಷಣ ಏನಾದರೊಂದು ವಿಸ್ಮಯಗಳಿಗೆ ಸಾಕ್ಷಿಯಾಗುತ್ತಿರುವ ಆಗಸ ವಿಜ್ಞಾನಿಗಳಿಗೂ ಕುತೂಹಲಕಾರಿಯಾದುದು. ಇದೀಗ ಬಾನಂಗಳ ಮತ್ತೊಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಹೊಸದಾಗಿ ಪತ್ತೆಯಾದ ‘ನಿಯೋವೈಸ್ ಧೂಮಕೇತು’ ಭಾರತೀಯರಿಗೆ ಗೋಚರಿಸುವ ಸಮಯ. ಹೌದು, ಜುಲೈ ೧೪ರಿಂದ 20 ದಿನಗಳ ಕಾಲ ‘ನಿಯೋವೈಸ್ ಧೂಮಕೇತು’ (ಸಿ/2020 ಎಫ್3) ಕಾಣಿಸಿಕೊಳ್ಳಲಿದೆ. ಇದುವರೆಗೆ ಜಗತ್ತಿನ ಹಲವಾರು ಭಾಗಗಳಲ್ಲಿ ಈ ಧೂಮಕೇತು ಗೋಚರವಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಸ್ಪಷ್ಟವಾಗಿ ಗೋಚರಗೊಳ್ಳುತ್ತಿದೆ ಎನ್ನಲಾಗಿದೆ.
ಪ್ರಸ್ತುತ ಈ ಧೂಮಕೇತು ಭೂಮಿಯಿಂದ 20 ಕೋಟಿ ಕಿ.ಮೀ. ದೂರದಲ್ಲಿ ಪರಿಭ್ರಮಿಸುತ್ತಿದೆ. ಜು.22ರಂದು ಅದು ಭೂಮಿಯ ಸಮೀಪಕ್ಕೆ ಅಂದರೆ 10.30 ಕೋಟಿ ಕಿ.ಮೀ.ಗಳ ಹತ್ತಿರಕ್ಕೆ ಆಗಮಿಸಲಿದ್ದು, ಸ್ಪಷ್ಟವಾಗಿ ಗೋಚರವಾಗಲಿದೆಯಂತೆ.
ಆಕಾಶದ ವಾಯುವ್ಯ ಭಾಗದಲ್ಲಿ ಸ್ಪಷ್ಟವಾಗಿ ಗೋಚರವಾಗಲಿದ್ದು, ಪ್ರತಿ ದಿನ ಸುಮಾರು 20 ನಿಮಿಷಗಳ ಕಾಲ ಈ ಆಕಾಶಕಾಯವು ಗೋಚರಿಸಲಿದೆ. ಇದನ್ನು ಬರಿಗಣ್ಣಿನಿಂದಲೇ ವೀಕ್ಷಿಸಬಹುದಾಗಿದೆ. ಜುಲೈ 22-23ರಂದು ಭೂಮಿಯ ಅತ್ಯಂತ ಸಮೀಪಕ್ಕೆ ಧೂಮಕೇತು ಬರಲಿದೆ ಎಂದು ಒಡಿಶಾ ಪ್ಲಾನೆಟೋರಿಯಂನ ಉಪ ನಿರ್ದೇಶಕರು ತಿಳಿಸಿದ್ದಾರೆ.