ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ ಭಾರೀ ಭೂಕುಸಿತದ ವರದಿಯಾಗಿದ್ದು. ಪಶ್ಚಿಮ ನೇಪಾಳದ ಅಚಮ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಭೂಕುಸಿತದಿಂದ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಇನ್ನೂ 10 ನಾಗರಿಕರು ನಾಪತ್ತೆಯಾಗಿದ್ದು, 10 ಜನರನ್ನು ರಕ್ಷಿಸಲಾಗಿದೆ ಎಂದು ಉಪ ಮುಖ್ಯ ಜಿಲ್ಲಾಧಿಕಾರಿ ದೀಪೇಶ್ ರಿಜಾಲ್ ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಗೃಹ ಸಚಿವರು ಆದೇಶಿಸಿದ್ದಾರೆ.
ಸತತ ಭಾರೀ ಮಳೆಯಿಂದ ನೇಪಾಳ ತತ್ತರಿಸಿದ್ದು, ಪ್ರವಾಹ ಮತ್ತು ಭೂಕುಸಿತದ ಘಟನೆಗಳು ಸಂಭವಿಸುತ್ತಿವೆ. ಕಳೆದ ಶನಿವಾರ, ನೇಪಾಳದ ದಾರ್ಚುಲಾ ಜಿಲ್ಲೆಯ ಬಂಗ್‌ಬಗಡ ಪ್ರದೇಶದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದರು ಮತ್ತು 11 ಮಂದಿ ನಾಪತ್ತೆಯಾಗಿದ್ದರು. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಲಸ್ಕು ಮತ್ತು ಮಹಾಕಾಳಿ ನದಿಗಳು ತುಂಬಿ ಹರಿಯುತ್ತಿದ್ದು, ಮನೆಗಳು ಹಾಗೂ ಎರಡು ಸೇತುವೆಗಳು ಕೊಚ್ಚಿ ಹೋಗಿವೆ. ನೇಪಾಳದಲ್ಲಿ ಪ್ರತಿ ವರ್ಷವೂ ಮಾನ್ಸೂನ್ ಅವಧಿಯಲ್ಲಿ ಪ್ರವಾಹ ಮತ್ತು ಭೂಕುಸಿತದ ವಿಪತ್ತುಗಳಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ.