ಮಂಗಳೂರು: ‘ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಫಥ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯಲ್ಲಿರುವ ಗುಂಡಿಗಳನ್ನು 2023ರ ಜ.15ರ ಒಳಗೆ ಮುಚ್ಚುವಂತೆ ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸುವ ಕುರಿತು ಹಾಗೂ ಹೆದ್ದಾಯಲ್ಲಿರುವ ಗುಂಡಿಗಳಿಂದ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಕೆಪಿಟಿಸಿಎಲ್ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಹೆದ್ದಾರಿ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಡಿಸೆಂಬರ್ ಅಂತ್ಯದಲ್ಲಿ ಮೂಡುಬಿದಿರೆಯಲ್ಲಿ ಅಂತರರಾಷ್ಟ್ರೀಯ ಜಾಂಬೂರಿ ನಡೆಯಲಿದೆ ಜೊತೆಗೆ ವರ್ಷಾಂತ್ಯದಲ್ಲಿ ಕರಾವಳಿ ಉತ್ಸವವೂ ನಡೆಯಲಿದೆ. ಈ ವೇಳೆ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡಲಿದ್ದಾರೆ. ಈ ವೇಳೆಗೆ ಹೆದ್ದಾರಿಯು ಗುಂಡಿಗಳಿಂದ ಮುಕ್ತವಾಗಿರಬೇಕು ಎಂಬ ಆಶಯ ಜಿಲ್ಲಾಡಳಿತದ್ದು. ಆದರೆ, ಅಷ್ಟರೊಳಗೆ ಗುಂಡಿ ಮುಚ್ಚುವುದು ಕಷ್ಟಸಾಧ್ಯ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ತಿಳಿಸಿದರು.