ಮಂಗಳೂರು: ಮಂಗಳೂರು ಸೇರಿದಂತೆ ಕರ್ನಾಟಕ ಹಲವೆಡೆ ಹಾಗೂ ದೇಶದ ಹತ್ತು ರಾಜ್ಯಗಳಲ್ಲಿರುವ ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಕಚೇರಿಗಳು ಹಾಗೂ ಮುಖಂಡರ ನಿವಾಸಗಳ ಮೇಲೆ ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯದ ಎಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕರ್ನಾಟಕದ ಮಂಗಳೂರು, ಉತ್ತರಕನ್ನಡದ ಶಿರಸಿ, ಕಲಬುರಗಿ, ಬೆಂಗಳೂರು , ಶಿವಮೊಗ್ಗ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದ್ದು ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ನಗರ ಹಾಗೂ ಹೊರವಲಯದ ಹಲವೆಡೆ ಪಿ ಎಫ್ ಐ ಮುಖಂಡರ ಮನೆ ಮೇಲೆ ದಾಳಿ ನಡೆಸಲಾಗಿದ್ದು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಪಿಎಫ್ ಐ ಮತ್ತು ಎಸ್ ಡಿಪಿಐ ಜಿಲ್ಲಾ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕಂಕನಾಡಿ, ಹಳೆಯಂಗಡಿ, ಜೋಕಟ್ಟೆ, ಕಾವೂರಿನಲ್ಲಿರುವ ಪಿ ಎಫ್ ಐ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಪುತ್ತೂರಿನಲ್ಲಿರುವ ಎಸ್ ಡಿ ಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಮನೆಗೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತರಿಂದ ಪ್ರತಿಭಟನೆ
ಎನ್ ಐ ಎ ಅಧಿಕಾರಿಗಳ ದಾಳಿ ಖಂಡಿಸಿ ಮಂಗಳೂರಿನಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ದಾಳಿ ನಡೆಸಿರುವ ಸುದ್ದಿ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಎನ್ ಐಎ ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೋಕಟ್ಟೆ, ಕಾವೂರು, ನೆಲ್ಲಿಕಾಯಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಿಆರ್ ಪಿಎಫ್ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಾವುದೇ ಗೊಂದಲಗಳಾಗಿಲ್ಲ-ಕಮೀಷನರ್
ಯಾವುದೇ ಗೊಂದಲಗಳಾಗಿಲ್ಲ. ದಾಳಿಯನ್ನು ಖಂಡಿಸಿ ಕಾವೂರು, ಜೋಕಟ್ಟೆ, ಬಂದರು ಏರಿಯಾದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಜೋಕಟ್ಟೆ, ಕಾವೂರು ಭಾಗದಲ್ಲಿ ಜನರನ್ನು ಚದುರಿಸಿದ್ದೇವೆ. ಬಂದರು ಪ್ರದೇಶ ಸೂಕ್ಷ್ಮಪ್ರದೇಶವಾಗಿರುವುದರಿಂದ ಇಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದೇವೆ. ಉಳಿದಂತೆ ನಗರದಲ್ಲಿ ಸಾಮಾನ್ಯ ಭದ್ರತೆ ಕಲ್ಪಿಸಲಾಗಿದೆ ಎಂದು ಕಮೀಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ-SDPI ಜಿಲ್ಲಾಧ್ಯಕ್ಷ
ನಮ್ಮ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ.ಪಿಎಫ್ ಐ ಕಛೇರಿಗೆ ದಾಳಿ ಮಾಡಲು ವಾರೆಂಟ್ ಇತ್ತು. ಆದರೆ ನಮ್ಮ ಕಚೇರಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.ಕೆಲವೊಂದು ದಾಖಲೆ ಪತ್ರ ಹಾಗೂ ನಾವು ಬಳಸಿದ ಲ್ಯಾಪ್ ಟಾಪ್ ಪಡೆದುಕೊಂಡಿದ್ದಾರೆ.ಯಾವ ವಿಚಾರಕ್ಕೆ ದಾಳಿ ಮಾಡಿದ್ದಾರೆ ಎಂದು ಅವರು ತಿಳಿಸಿಲ್ಲ . ಇದು ಬಿಜೆಪಿ ಸರಕಾರದ ಕುತಂತ್ರ ಅನ್ನೋದು ಸ್ಪಷ್ಟ ಎಂದು SDPI ಜಿಲ್ಲಾಧ್ಯಕ್ಷ ಅಬ್ಬುಬಕ್ಕರ್ ಹೇಳಿಕೆನೀಡಿದ್ದಾರೆ.