ಧರ್ಮಸ್ಥಳ: ‘ಬಿಜೆಪಿಯ ಯಾವ ಶಾಸಕರೂ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ರಕ್ಷಣೆ ಮಾಡುವ ಮತ್ತು ಸಂಘಟನೆ ಇರುವ ಬಿಜೆಪಿ ದೇಶದೆಲ್ಲೆಡೆ ಯಶಸ್ಸು ಪಡೆಯುತ್ತಿದೆ. ಯಾರು ತಾನೇ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಇಷ್ಟ ಪಡುತ್ತಾರೆ’ ಎಂದು ಟೀಕಿಸಿದರು.
ಪಕ್ಷಕ್ಕೆ ಅವರು ಬರುತ್ತಾರೆ, ಇವರು ಬರುತ್ತಾರೆ ಎಂದು ಕಾಂಗ್ರೆಸ್ಸಿನವರು ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಶಾಸಕರು ಬರುತ್ತಾರೋ, ನಾಯಕರು ಬರುತ್ತಾರೋ ನೋಡೋಣ’ ಎಂದು ಹೇಳಿದರು.
‘ಈಶಾನ್ಯ ರಾಜ್ಯಗಳಲ್ಲಿ 180 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ದಕ್ಕಿದ್ದು ಏಳು ಸ್ಥಾನಗಳು ಮಾತ್ರ. ಬಿಜೆಪಿ ಮೂರೂ ಕಡೆ ಅಧಿಕಾರಕ್ಕೆ ಬಂದಿದೆ’ ಎಂದರು.
‘ವಿಜಯ ಸಂಕಲ್ಪ ಯಾತ್ರೆಯು ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆದ್ದು ಬರಲು ನೆರವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಪುತ್ತೂರು ಕ್ಷೇತ್ರಗಳಲ್ಲಿ ನಡೆದ ಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ . ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಮತ್ತು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವುದು ಹಾಗೂ ದೇಶದ ರಕ್ಷಣೆ, ಸಂಸ್ಕೃತಿಯ ಕಾಪಾಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಇರುವುದೇ ಇದಕ್ಕೆ ಕಾರಣ ಎಂದು ಬಿಜೆಪಿ ಪಕ್ಷವನ್ನು ಕೊಂಡಾಡಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಶಾಸಕ ಹರೀಶ್ ಪೂಂಜಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.