ವಾಣಿಜ್ಯ ಜಾಹಿರಾತು

ನವದೆಹಲಿ: ಭಾರತದಲ್ಲಿ ಯಾವುದೇ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ಯೋಚನೆಯಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಲಿಖಿತ ಉತ್ತರ ನೀಡಿದ್ದು ಇದರಲ್ಲಿ, ‘ಪ್ರಸ್ತುತ, ಕೇಂದ್ರ ಸರ್ಕಾರವು ದೇಶದ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ನಿರ್ಬಂಧಿಸುವ ಯೋಜನೆಯನ್ನು ಹೊಂದಿಲ್ಲ’ ಎಂದು ತಿಳಿಸಿದ್ದಾರೆ.

ಆದರೆ, ‘ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಸೆಕ್ಷನ್ 69ಎ ಅಡಿಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಭಾರತದ ಸಾರ್ವಭೌಮತ್ವ ರಕ್ಷಣೆ, ರಾಜ್ಯದ ಭದ್ರತೆ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತಹಾ ವಿಷಯಗಳು ಪ್ರಕಟವಾದಾಗ ಅವುಗಳನ್ನು ನಿರ್ಬಂಧಿಸಲಾಗುವುದು’ ಎಂದು ಅವರು ಹೇಳಿದರು.

‘ನೂತನ ಐಟಿ ಕಾಯ್ದೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳ ಹೊಣೆಗಾರಿಕೆ, ಸಾಮಾಜಿಕ ಮಾಧ್ಯಮ ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಸರ್ಕಾರವು ಸೋಷಿಯಲ್ ಮೀಡಿಯಾ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮಾತುಕತೆ ನಡೆಸುತ್ತಿದೆ’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

‘ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಜನರಲ್ಲಿ ದ್ವೇಷವನ್ನು ಬೆಳೆಸಲು ಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆ ಅಥವಾ ಇತರ ಯಾವುದೇ ಮಧ್ಯವರ್ತಿಗಳು ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ’ ಎಂದು ಸಚಿವ ರಾಜೀವ್ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

‘ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸರ್ಕಾರ ಕುಂದು ಕೊರತೆಯ ಪರಿಶೀಲನೆ ನಡೆಸುತ್ತಿದೆ. ಸರ್ಕಾರವು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ನಿಯಮಿತವಾಗಿ ಸುರಕ್ಷತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸಲಹೆಗಳನ್ನು ನೀಡುತ್ತದೆ’ ಎಂದು ಅವರು ತಿಳಿಸಿದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.