ಪುತ್ತೂರು: ಯಾವುದೇ ಪಠ್ಯವನ್ನು ತೆಗೆದುಹಾಕಿಲ್ಲ, ಪಠ್ಯಗಳಲ್ಲಿ ಅದಲು ಬದಲು ಮಾಡಿರುವುದು ನಿಜ ಎಂದು ರಾಜ್ಯ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಪುತ್ತೂರಿನ ಹಾರಾಡಿ ಸರಕಾರಿ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮಕ್ಕಳಿಗೆ ಹೊರೆಯಾಗದಿರಲಿ ಎನ್ನುವ ಕಾರಣಕ್ಕೆ ಪಠ್ಯದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಯಾವ ಪಠ್ಯವನ್ನೂ ತೆಗೆದು ಹಾಕಿಲ್ಲ ಇನ್ನೆರಡು ದಿನದಲ್ಲಿ ಪಠ್ಯಪುಸ್ತಕ ಪ್ರಿಂಟಿಂಗ್ ಕೆಲಸ ಮುಗಿದು ಪುಸ್ತಕ ಹೊರಬರುತ್ತದೆ ಎಂದು ಅವರು ತಿಳಿಸಿದ್ದಾರೆ. ಶಿಕ್ಷಣದ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವುದು ದುರ್ದೈವ ಎಂದು ಕಾಂಗ್ರೆಸಿಗರ ಆರೋಪ ಕುರಿತಂತೆ ಪ್ರತಿಕ್ರಿಯಿಸಿದರು.
ಈ ಬಾರಿ ಸಮವಸ್ತ್ರ ಕಡ್ಡಾಯವಾಗಲಿದೆ
ಶಾಲಾಭಿವೃದ್ಧಿ ಸಮಿತಿಗೆ ಸಮವಸ್ತ್ರದ ಕುರಿತು ಕ್ರಮ ತೆಗೆದುಕೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ. ಈ ಬಾರಿ ಸಮವಸ್ತ್ರ ಕಡ್ಡಾಯವಾಗಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಪ್ರೌಢಶಾಲೆಯವರೆಗೆ ಸರಕಾರದಿಂದ ಸಮವಸ್ತ್ರ ವಿತರಿಸಲಾಗುತ್ತದೆ. ಆದರೆ ಕೆಲವೊಂದು ಕಾರಣಗಳಿಂದ ಈ ಬಾರಿ ಒಂದೂವರೆ ತಿಂಗಳು ಸಮವಸ್ತ್ರ ವಿತರಣೆ ತಡವಾಗಲಿದೆ. ಕಲಿಕಾ ಚೇತರಿಕೆ ಕಾರ್ಯಕ್ರಮ ಮುಗಿದ ತಕ್ಷಣ ಪಠ್ಯಪುಸ್ತಕ ವಿತರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಶಾಲೆ ಆರಂಭದಂದೇ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದ್ದು, 15 ಸಾವಿರ ಹೊಸ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಪ್ರಕೃತಿ ವಿಕೋಪ ಹಾಗೂ ಇತರ ಸಮಸ್ಯೆಗಳಿಂದಾಗಿ ಹಾನಿಗೊಳಗಾದ ಶಾಲಾ ಕೊಠಡಿ ಹಾಗೂ ಕಟ್ಟಡಕ್ಕಾಗಿ ಈ ಬಾರಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ಪುತ್ತೂರಿನ ಹಾರಾಡಿ ಸರಕಾರಿ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು ಮೆಕಾಲೆ ಶಿಕ್ಷಣ ಪದ್ಧತಿ ಮಕ್ಕಳನ್ನು ಕೇವಲ ಉದ್ಯೋಗದ ಪ್ರಾಡಕ್ಟ್ ಆಗಿ ರೂಪಿಸುತ್ತಿದೆ. ಈ ವ್ಯವಸ್ಥೆಯನ್ನು ಬದಲಾಯಿಸುವ ಕಾರಣಕ್ಕಾಗಿಯೇ ಕೇಂದ್ರ ಸರಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಈ ಮೂಲಕ ಮಕ್ಕಳಿಗೆ ಶಿಕ್ಷಣದಲ್ಲಿ ಅವಕಾಶ ಹಾಗೂ ಮಕ್ಕಳನ್ನು ಕೇಂದ್ರೀಕರಿಸಿ ಹೊಸ ಶಿಕ್ಷಣ ನೀತಿಯನ್ನು ತಯಾರು ಮಾಡಲಾಗಿದೆ ಎಂದರು.