ಉಡುಪಿ: ಹೆಜಮಾಡಿ ಟೋಲ್ಗೇಟ್ನಲ್ಲಿ ಪರಿಷ್ಕೃತ ದರ ಜಾರಿಗೊಳಿಸಲು ಅಗತ್ಯ ಸಹಕಾರ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು ಪ್ರಾದೇಶಿಕ ಕಚೇರಿಯಿಂದ ಪತ್ರ ಬಂದಿದೆ. ಅದರಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆಗೆ ಭಂಗವಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಜಮಾಡಿ ಟೋಲ್ಗೇಟ್ನಲ್ಲಿ ಪರಿಷ್ಕೃತ ದರ ಜಾರಿ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕರಿಗೆ ಪತ್ರಿಕೆಗಳಲ್ಲಿ ಮಾಹಿತಿ ನೀಡಲಿದ್ದು ಬಳಿಕ ನಿರ್ಧಿಷ್ಟ ದಿನಾಂಕದಂದು ಪರಿಷ್ಕೃತ ಟೋಲ್ ದರ ವಸೂಲು ಮಾಡಲಿದೆ ಎಂದು ತಿಳಿಸಿದರು.
ಹೆಜಮಾಡಿ ಟೋಲ್ ದರ ಹೆಚ್ಚಳ ವಿರೋಧಿಸಿ ಜಿಲ್ಲಾಡಳಿತಕ್ಕೆ ಇದುವರೆಗೂ ಯಾವುದೇ ಲಿಖಿತ ಮನವಿಗಳು ಬಂದಿಲ್ಲ. ಬಂದರೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಟೋಲ್ ದರ ಹೆಚ್ಚಳ ವಿಚಾರವಾಗಿ ಚರ್ಚಿಸಲು ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಲು ತಿಳಿಸಿದ್ದು, ಶೀಘ್ರ ದಿನಾಂಕ ನಿಗದಿ ಮಾಡಲಾಗುವುದು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಹೆಜಮಾಡಿ ಟೋಲ್ಗೇಟ್ನಲ್ಲಿ ಹೆಚ್ಚುವರಿ ಟೋಲ್ ವಸೂಲಿ ವಿರುದ್ಧ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆಗೆ ಮುಂದಾಗಿರುವ ವಿಚಾರ ತಿಳಿದಿದೆ. ಶಾಂತಿಯುತ ಪ್ರತಿಭಟನೆಗೆ ಇಲಾಖೆ ಅಡ್ಡಿಪಡಿಸುವುದಿಲ್ಲ. ಆದರೆ, ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರೆ, ಸಾರ್ವಜನಿಕ ಆಸ್ತಿ ನಾಶಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.