ಲಾಕ್ ಡೌನ್ ಸಂದರ್ಭದಲ್ಲಿ ಜನರ ಕೈಹಿಡಿದು ಮೇಲೆತ್ತಿದ ನರೇಗ

0

ಘಟನೆ 1: ಮಂಗಳೂರಿನ ಶ್ರೀದೇವಿ ಕಾಲೇಜಿನ ಆರ್ಕಿಟೆಕ್ಟ್ ವಿಷಯದಲ್ಲಿ ಇಂಜಿನಿಯರಿಂಗ್ ಮುಗಿಸಿ ಗದಗದಲ್ಲಿ ಆರು ತಿಂಗಳು ಇಂಟರ್ನ್ ಶಿಪ್ ಮುಗಿಸಿ ಇತ್ತೀಚೆಗೆ ಕೆಲಸಕ್ಕೆ ಸೇರಿದವರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಅಗಸನಕೊಪ್ಪದ ಮಂಜುನಾಥ ಕರಿಯಪ್ಪ ಇವರು.ಇತ್ತೀಚಿನ ಲಾಕ್ ಡೌನ್ ಸಂರ್ಭದಲ್ಲಿ ಸೇರಿದ ಕೆಲಸವನ್ನು ಕಳೆದುಕೊಂಡ ಇವರು ತನ್ನ 10 ಎಕ್ರೆ ಒಣ ಬೇಸಾಯದ ಜಮೀನಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿ ನೆಮ್ಮದಿಯಾಗಿದ್ದೇನೆ ಎಂಬುದಾಗಿ ತಿಳಿಸಿರುವ ವಿಚಾರ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗಿತ್ತು.
ಘಟನೆ 2:  ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಹನುಮಂತಪುರ ಗ್ರಾಮದ ಎಚ್.ಎನ್ ಕಾರ್ತಿಕ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸಕ್ಕೆ ಹಾಜರಾಗಬೇಕು ಎನ್ನುವಷ್ಟರಲ್ಲಿ ಲಾಕ್ ಡೌನ್ ಘೋಷನೆಯಾಗಿ ಕೆಲಸವನ್ನು ಕಳೆದುಕೊಂಡರು.ಮನೆಯಲ್ಲಿ ಕುಳಿತುಕೊಂಡು ಸಮಯ ವ್ಯರ್ಥ ಮಾಡುವುದಕ್ಕಿಂತ ತನ್ನ ಜಮೀನಿನಲ್ಲಿಯೇ ನರೇಗದಲ್ಲಿ ಉದ್ಯೋಗ ಮಾಡಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದು ಇದರಿಂದ ನನಗೇನು ಬೇಸರವಿಲ್ಲ ಎನ್ನುತ್ತಾರೆ.
ಘಟನೆ 3: ಬೀದರ್ ನ ಪ್ರೀತಂ ಇವರ ಅನುಭವವನ್ನು ಅವರ ಮಾತಿನಲ್ಲಿಯೇ ಕೇಳೋಣ “” ನಾನು ಬಿಎಸ್ಸಿ ಬಿಎಡ್ ಓದಿದ್ದೇನೆ.ಕೊಳಾರ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಸಂಜೆ ಇನ್ನೊಂದು ಕಂಪನಿಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು.ಲಾಕ್ ಡೌನ್ ನಿಂದಾಗಿ ಕಂಪನಿಗಳು ಬಾಗಿಲು ಮುಚ್ಚಿ ಸಂಕಷ್ಟ ಎದುರಿಸಬೇಕಾಯಿತು.ಬೀದರ್ ತಾಲೂಕಿನ ಕಮಠಾಣದಲ್ಲಿ ನರೇಗ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸ ಸಿಕ್ಕಿತು.ಅನಕ್ಷರಸ್ಥ ಗ್ರಾಮೀಣ ಮಹಿಳೆಯರ ಜೊತೆ ಕೆಲಸ ಮಾಡಲು ಮೊದಲ ದಿನ ಸಂಕೋಚ ವಾಯಿತು. ಆದರೆ ನಂತರ ಹೊಂದಿಕೊಂಡು ಕೆಲಸ ಮಾಡಿದೆ. 21 ದಿನದಲ್ಲಿ ರೂ 5700.00 ಕೂಲಿ ಸಿಕ್ಕಿತು.ಶ್ರಮ ಪಟ್ಟು ದುಡಿದ ನಂತರ ಕೈ ಸೇರಿ ಹಣ ನೋಡಿ ಬಹಳ ಖುಷಿ ಆಯಿತು.ಅಷ್ಟೇ ಅಲ್ಲ ಇದು ನನಗೆ ಜೀವನ ಪಾಠವನ್ನು ಕಲಿಸಿತು.””
ಇದು ಗ್ರಾಮೀಣ ಜನರ ಅಕುಶಲ ದೈಹಿಕ ಕೆಲಸವನ್ನು ತಾನಾಗಿ ಮಾಡಲಿಚ್ಚಿಸುವ ಪ್ರತಿಯೊಂದು ಕುಟುಂಬದ ವಯಸ್ಕ ಸದಸ್ಯರಿಗೆ, ಪ್ರತಿಯೊಂದು ಹಣಕಾಸು ವರ್ಷದಲ್ಲಿ ಕನಿಷ್ಟ 100 ದಿನಗಳ ಖಾತರಿ ಮಜೂರಿ ಉದ್ಯೋಗ ಒದಗಿಸುವ ಮೂಲಕ ದೇಶದ ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳ ಜೀವನಾಧರ ಭದ್ರತೆ ಹೆಚ್ಚಿಸಲು ಮತ್ತು ಇದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಅನುಷಂಗಿಕವಾದ ವಿಷಯಗಳ ಬಗ್ಗೆ ಉಪಬಂದಿಸುವ ಯೋಜನೆ.ಇದನ್ನು 2005 ರಲ್ಲಿ ಕೇ0ದ್ರ ಸರಕಾರ ಜಾರಿಗೆ ತಂದಿತು.2009 ರಲ್ಲಿ “ ಮಹಾತ್ಮ ಗಾಂಧಿ “ ಹೆಸರನ್ನು ಯೋಜನೆಗೆ ಸೇರಿಸಲಾಯಿತು.2020-21 ನೇ ಸಾಲಿನಲ್ಲಿ ಭಾರತ ಸರಕಾರವು ರೂ 61500.00 ಕೋಟಿ ರೂಪಾಯಿಗಳನ್ನು ಬಜೆಟಿನಲ್ಲಿ ಮೀಸಲಿರಿಸಿದೆ. ಕೇಂದ್ರ ಹಾಗು ರಾಜ್ಯದ ಅನುದಾನ ಅನುಪಾತ 90;10 ಆಗಿದೆ.
ಮಜೂರಿ ದರ ಕನಿಷ್ಟ ಮಜೂರಿಗಳ ಅಧಿನಿಯಮ 1948 (1948 ರ1) ರಲ್ಲಿ ಏನೇ ಒಳಗೊಂಡಿದ್ದರೂ , ಕೇಂದ್ರ ಸರಕಾರವು ಈ ಅಧಿನಿಯಮದ ಉದ್ದೇಶಗಳಿಗಾಗಿ ನಿರ್ದಿಷ್ಟ ಮಜೂರಿ ದರವನ್ನು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಲಾಗುತ್ತದೆ. 2020-21 ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಮಜೂರಿ ದರವು ಕೂಲಿ ಮಾಡಿದ ಪ್ರತಿ ಕುಟುಂಬದ ಸದಸ್ಯನಿಗೆ ತಲಾ ರೂ.275.00 ಆಗಿರುತ್ತದೆ.
ಸಮಾಜದ ಜನರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸರಕಾರ ಕಾಲಕಾಲಕ್ಕೆ ಹಲವಾರು ಕ್ರಾಂತಿಕಾರಿ ಶಾಸನಗಳನ್ನು ರೂಪಿಸಿದೆ. ಎಲ್ಲ ಪ್ರಯತ್ನಗಳ ನಡುವೆ ಜನಸಾಮಾನ್ಯರ ಜೀವನದ ದಿಶೆಯನ್ನು ಬದಲಾಯಿಸುವ ಅಪರಿಮಿತ ಸಾಧ್ಯತೆಗಳ ಆಗರವೇ ಉದ್ಯೋಗ ಖಾತರಿ ಯೋಜನೆ. ಇದು ಅಭಿವೃದ್ಧಿಯ ಕಲ್ಪತರು ಎನಿಸಿಕೊಂಡು ಆತ್ಮಗೌರವದಿಂದ ಜೀವನೋಪಾಯಕ್ಕೆ ಎಡೆಮಾಡಿ ಸುಸ್ಥಿರ ಅಭಿವೃದ್ಧಿಯನ್ನು ಸಾಕಾರಗೊಳಿಸುವ ಅನನ್ಯ ಯೋಜನೆ ಎನಿಸಿಕೊಂಡಿದೆ.
ತ್ವರಿತ ಉದ್ಯೋಗ ಖಚಿತ ಪಾವತಿ.
ಅರ್ಹ ಕುಟುಂಬದ ವಯಸ್ಕ ಕಾರ್ಮಿಕರು ಬೇಡಿಕೆ ಇರಿಸಿದ 15 ದಿನಗಳ ಒಳಗೆ ಅಕುಶಲ ಉದ್ಯೋಗ ನೀಡಲಾಗುವುದು. ಕೂಲಿ ಮೊತ್ತವನ್ನು 15 ದಿನಗಳ ಒಳಗೆ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಪಾವತಿಸಲಾಗುವುದು. ಕೂಲಿಕಾರ್ಮಿಕರು ಬಳಸುವ ಸಲಕರಣೆ ಉದಾಹರಣೆಗೆ ಹಾರೆ, ಪಿಕಾಸಿ, ಸಬಳ ಇತ್ಯಾದಿ ನಿರ್ವಹಣೆಗೆ ದಿನವೊಂದಕ್ಕೆ ರೂಪಾಯಿಗಳಂತೆ ಪಾವತಿ. ವಾಸ ಸ್ಥಳಕ್ಕಿಂತ ಐದು ಕಿಲೋಮೀಟರ್ ಗಿಂತ ದೂರದಲ್ಲಿ ಕೆಲಸವಾಗಿದ್ದರೆ ಕೂಲಿಯ ಶೇಕಡ ಹತ್ತರಷ್ಟು ಪ್ರಯಾಣವೆಚ್ಚ ನೀಡಲಾಗುವುದು. ತ್ವರಿತ ಕೂಲಿ ವೇತನಕ್ಕಾಗಿ ಪ್ರತಿಯೊಬ್ಬ ಕೂಲಿಕಾರರ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿರುತ್ತದೆ.
ನರೇಗ-ನಿಮಗಿದು ಜೀವನಾಧಾರ
1.ಕುರಿ ಮೇಕೆ ಕೋಳಿ ದನ ಹಂದಿ ಶೆಡ್ ನಿರ್ಮಾಣ
2. ಭೂ ಅಭಿವೃದ್ಧಿ /ಭೂ ಸಮತಟ್ಟು
3. ಬದು ನಿರ್ಮಾಣ
4. ಕೃಷಿ ಹೊಂಡ
5.ಸೋಕ್ ಪಿಟ್ (ಇಂಗು ಗುಂಡಿ)
6. ತೋಟಗಾರಿಕಾ ಬೆಳೆಗಳು (ಇಲಾಖೆ ಅನುಮತಿಸಿದ ವಲಯವಾರು ತೋಟಗಾರಿಕೆ ಬೆಳೆಗಳು) ಹಾಗೂ ಅವರಿಗೆ ಅವಕಾಶ
7. ರೈತರ ಜಮೀನುಗಳಲ್ಲಿ ಗಿಡಗಳ ನಡುವಿಗೆ
8. ಕೊಳವೆ ಬಾವಿ ಮರುಪೂರಣ ಘಟಕ
9. ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ
10. ಹಿಪ್ಪುನೇರಳೆ ತೋಟ/ ಮರಗಡ್ಡೆ ಹಿಪ್ಪುನೇರಳೆ ಅಭಿವೃದ್ಧಿ
ಸಮುದಾಯ ಕಾರ್ಯಕ್ಕೆ ಜೊತೆ ನೀಡುವುದು ನರೇಗಾ.
ಗೋಕಟ್ಟೆ ಹೂಳೆತ್ತುವುದು, ಆಟದ ಮೈದಾನ, ಸ್ಮಶಾನ ಅಭಿವೃದ್ಧಿ, ರೈತರ ಕಣ, ಕೃಷಿ ಹೊಂಡ, ಗ್ರಾಮೀಣ ಗೋದಾಮುಗಳು, ಗ್ರಾಮೀಣ ಉದ್ಯಾನವನ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಗ್ರಾಮದ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ನಮ್ಮ ಹೊಲ ನಮ್ಮ ದಾರಿ( ರೈತರ ಹೊಲಗಳಿಗೆ ಹೋಗುವ ದಾರಿ) ಕಿಂಡಿ ಅಣೆಕಟ್ಟು, ಗ್ರಾಮೀಣ ಮಾರುಕಟ್ಟೆ, ಮಳೆನೀರಿನ ಬಸಿಕಾಲುವೆ, ಎನ್ ಆರ್ ಎಲ್ ಎಂ ಶೆಡ್ಡ್ ರಚನೆ.
ತೋಟಗಾರಿಕಾ ಬೆಳೆಗಳಿಗೆ ನರೇಗ ಬಲ( ಹೆಕ್ಟೇರ್ ಒಂದಕ್ಕೆ)
1.ಮಾವು -ರೂಪಾಯಿ 44381.00
2.ತೆಂಗು -ರೂಪಾಯಿ 62496.00
3.ಅಡಿಕೆ ಗಿಡ- ರೂಪಾಯಿ 267588.00
4.ಕಾಳು ಮೆಣಸು (ತೆಂಗಿನ ತೋಟದ ಅಂತರ ಬೆಳೆ ) ರೂಪಾಯಿ 20339.00
ಅಡಿಕೆ ತೋಟ ಅಂತರ ಬೆಳೆ ರೂಪಾಯಿ 111535.00
ಅಷ್ಟೇ ಅಲ್ಲದೆ ಗೇರು, ತಾಳೆ ,ನೇರಳೆ, ಸೀತಾಫಲ ಅಂಗಂಶಗಳು ನುಗ್ಗಿ ಬೆಳೆಗಳನ್ನು ಕೂಡ ಬೆಳೆಯಲು ಅವಕಾಶವಿದೆ.

ಕೃಷಿ ಕಾರ್ಯ ಮಾಡುವ ಉಲ್ಲಾಸದಿಂದ….. ನರೇಗಾದಡಿ ಉತ್ಸಾಹದಿಂದ….

1.ಕ್ಷೇತ್ರಬದು ನಿರ್ಮಾಣ್ ರೂಪಾಯಿ- 10000.00
2. ಎರೆಹುಳು ತೊಟ್ಟಿ ರೂಪಾಯಿ- 21500.00
3. ಇಂಗುಗುಂಡಿ ರೂಪಾಯಿ -15000.00
4. ಟ್ರಂಚಿಂಗ್ ರೂಪಾಯಿ -1000.00
5. ಕಂಪೋಸಿಟ್ ರೂಪಾಯಿ- 23000.00
6. ಜೀವಸಾರ ಘಟಕ ರೂಪಾಯಿ -11000.00
7. ಕೃಷಿ ಹೊಂಡ ರೂಪಾಯಿ 32500 ರಿಂದ ರೂಪಾಯಿ 70000.00 ದವರೆಗೆ.
8.ಬಯೋಗ್ಯಾಸ್ ಘಟಕ 20 ಮಾನವ ದಿನಗಳು.
ಮನೆಗೊಂದು ಮರ ಊರಿಗೊಂದು ವನ
ನಿಮ್ಮ ಸ್ವಂತ ಜಮೀನು ಮತ್ತು ಬದುಗಳಲ್ಲಿ ಸಿಲ್ವರ್ ,ಹೆಬ್ಬೇವು,ಹಲಸು ,ಮಹಾಗನಿ ,ತೇಗ ಮುಂತಾದ ಗಿಡಗಳನ್ನು ಬೆಳೆಯಲು ಅರಣ್ಯ ಇಲಾಖೆ ಸಹಕಾರ ನೀಡುತ್ತಿದೆ ಅದನ್ನು ಬಳಸಿ ನರೇಗ ವನ ರಚಿಸಿ.
ವಸತಿ ಯೋಜನೆ ಮನೆಗಳಿಗೆ ವಸತಿ ಇಲಾಖೆಯಿಂದ ನೀಡುವ ಎಸ್ಸಿಎಸ್ಟಿ ಕುಟುಂಬಗಳಿಗೆ ರೂಪಾಯಿ 150000 ಇತರೆ ಕುಟುಂಬಗಳಿಗೆ ತಲಾ 120000 ಜೊತೆಗೆ ನಾಲ್ಕು ಹಂತಗಳಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ರೂಪಾಯಿ 24750.00 ನೀಡಲಾಗುವುದು.
ಭೂಮಿ ಹೊಂದಿದವರು ಮತ್ತು ಕೃಷಿಭೂಮಿ ಇಲ್ಲದವರು ಕೂಡ ಉದ್ಯೋಗ ಖಾತರಿ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಸಫಲತೆಯನ್ನು ಪಡೆಯಲು ಇರುವಂತಹ ಯೋಜನೆಗಳಲ್ಲಿ ಬಹುದೊಡ್ಡ ಯೋಜನೆ ಇದಾಗಿದೆ. ಪಾರದರ್ಶಕತೆ ಯಲ್ಲಿ ನಡೆಯುವಂತಹ ಈ ಯೋಜನೆ ತಳಮಟ್ಟದ ಗ್ರಾಮೀಣರ ಬದುಕು ಹಸನಾಗಲು ಜೀವನಾಧಾರವಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.