ರೋಗಿಗಳು ಗುಣಮುಖರಾಗಲು ಔಷಧಿಗಳು ಎಷ್ಟು ಪರಿಣಾಮಕಾರಿಯೋ ಅದೇ ರೀತಿ ರೋಗಿಗಳು ಮಾನಸಿಕವಾಗಿಯೂ ಸಂತೋಷವಾಗಿರುವುದು ಶೀಘ್ರ ಗುಣಮುಖರಾಗಲು ಸಹಕಾರಿ. ಅದಕ್ಕಾಗಿಯೇ ಆಸ್ಪತ್ರೆಗಳಲ್ಲಿ ರೋಗಿಗಳ ಮನಸ್ಸಿಗೆ ಉಲ್ಲಾಸ ನೀಡಲು ವೈದ್ಯಕೀಯ ಸಿಬ್ಬಂದಿ ತಮಾಷೆಯಾಗಿ ಮಾತನಾಡುವುದು, ನೃತ್ಯ, ಹಾಡು ಮನರಂಜನೆ ನೀಡುವ ಕೆಲವು ವಿಡಿಯೋಗಳನ್ನು ನೋಡಿರಬಹುದು. ಅಂತೆಯೇ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಪಾರ್ಶ್ವವಾಯುವಿನಿಂದ ಬಳಲುತ್ತಿರುವ ರೋಗಿಯೊಬ್ಬರಿಗೆ ವೈದ್ಯಕೀಯ ಸಿಬ್ಬಂದಿ ಹಾಡಿಗೆ ನೃತ್ಯ ಮಾಡುವ ಮೂಲಕ ಫಿಸಿಯೋಥೆರಪಿ ಮಾಡಿಸುತ್ತಿದ್ದಾರೆ. ಅನಾರೋಗ್ಯದಿಂದಿರುವ ವ್ಯಕ್ತಿಯು ಬೆಡ್ ಮೇಲೆ ಹಾಡಿಗೆ ತಕ್ಕಂತೆ ಸಿಬ್ಬಂದಿ ಹೇಳಿಕೊಟ್ಟ ರೀತಿಯಲ್ಲಿ ಕೈಗಳನ್ನು ಅಲುಗಾಡಿ ಖುಷಿಯಿಂದ ನೃತ್ಯ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈದ್ಯಕೀಯ ಸಿಬ್ಬಂದಿಯ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಈ ವಿಡಿಯೋ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಆಸ್ಪತ್ರೆಯ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ಪಾರ್ಶ್ವವಾಯು ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ನರ್ಸ್ ಮಾಡಿದ ಈ ಉಪಾಯ ಉತ್ತಮವಾಗಿದೆ ಎಂದಿದ್ದಾರೆ.