ಬೆಂಗಳೂರು: ಕಟ್ಟಡಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ (ಓಸಿ) ಇಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಣೆ ಇನ್ನು ಸಾಧ್ಯವಿಲ್ಲ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿದ್ಯುತ್ ಸಂಪರ್ಕ ಪಡೆಯಲು ‘ವಾಸ್ತವ್ಯ ಪ್ರಮಾಣಪತ್ರ’ (ಒಸಿ) ಕಡ್ಡಾಯ ಎಂಬ ನಿಯಮವನ್ನು ತೆಗೆದು ಹಾಕಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ತಿದ್ದುಪಡಿ ಆದೇಶಕ್ಕೆ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದೆ.
ಇಂಧನ ಸಚಿವ ವಿ. ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದು, ಇನ್ನು ಮುಂದೆ ಗುರುತಿನ ಚೀಟಿ ಹಾಗೂ ಸ್ವತ್ತಿನ ಹಕ್ಕುಪತ್ರ ಇದ್ದರೆ ವಿದ್ಯುತ್ ಸಂಪರ್ಕ ಪಡೆಯಬಹುದು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ತಿದ್ದುಪಡಿ ಆದೇಶವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಆದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಈ ‘ಕತ್ತಲೆ ಭಾಗ್ಯ’ದ ಕಾನೂನನ್ನು ನಮ್ಮ ಸರ್ಕಾರ ಬದಲಾಯಿಸಿದೆ. ಇದರಿಂದ ಎಲ್ಲರ ಮನೆಯಲ್ಲೂ ಬೆಳಕು ಮೂಡಲಿದೆ ಎಂದರು.
ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿ ವಾಸ್ತವ್ಯ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರೆ ಅಂಥ ಮನೆ ಹಾಗೂ ಫ್ಲಾಟ್ಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದೇಶ ಹೊರಡಿಸಲಾಗಿತ್ತು. ಇದರಿಂದ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆಯಲು ವಿಫಲವಾಗಿದ್ದವು. ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಈ ಧೋರಣೆ ಜನರ ಆಕ್ರೋಶಕ್ಕೆ ಕಾರಣ ಆಗಿತ್ತು. ಸಾರ್ವಜನಿಕರಿಂದ ಈ ಬಗ್ಗೆ ಅಹವಾಲು ಸ್ವೀಕರಿಸಿದ್ದ ಆಯೋಗ, ತಿದ್ದುಪಡಿ ಆದೇಶ ಹೊರಡಿಸಿತ್ತು. ಅದೀಗ ಈಗ ರಾಜ್ಯಪತ್ರದ ಮೂಲಕ ಅಧಿಕೃತಗೊಂಡಿದೆ.