ವಾಣಿಜ್ಯ ಜಾಹಿರಾತು

ಮಂಗಳೂರು: 2022-23ರ ಕೇಂದ್ರ ಬಜೆಟ್‌ನಲ್ಲಿ ಮೈಸೂರು ನಿಲ್ದಾಣದಲ್ಲಿ ಪ್ರಾರಂಭಿಸಿದ್ದ ’ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯನ್ನು ಸುಬ್ರಹ್ಮಣ್ಯ ರೋಡ್‌, ಕಬಕ ಪುತ್ತೂರು ಹಾಗೂ ಬಂಟ್ವಾಳ ನಿಲ್ದಾಣಗಳಿಗೂ ವಿಸ್ತರಿಸಲಾಗಿದೆ.

ಪ್ರಯಾಣಿಕರಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಸಲುವಾಗಿ ಮತ್ತು ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸಿ ಸಮಾಜದ ಕೆಳಸ್ತರದಲ್ಲಿರುವ ವರ್ಗಕ್ಕೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ 2022-23ರ ಕೇಂದ್ರ ಬಜೆಟ್‌ನಲ್ಲಿ “ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆ ಘೋಷಿಸಿ ಮೈಸೂರು ನಿಲ್ದಾಣದಲ್ಲಿ ಆರಂಭಿಸಲಾಗಿತ್ತು. ಪ್ರಯಾಣಿಕರ ಸಕಾರಾತ್ಮಕ ಪ್ರತಿಕ್ರಿಯೆಯ ಫ‌ಲವಾಗಿ ಸುಬ್ರಹ್ಯಣ್ಯ, ಪುತ್ತೂರು, ಬಂಟ್ವಾಳ ಒಳಗೊಂಡಂತೆ ಒಟ್ಟು 67 ನಿಲ್ದಾಣಗಳಿಗೆ ವಿಸ್ತರಿಸಲಾಗಿದೆ. ನಿಲ್ದಾಣಗಳಲ್ಲಿ ಸ್ಥಳೀಯ ವಿಶೇಷ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಒದಗಿಸುವ ಮೂಲಕ ಅವುಗಳನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಉತ್ಪನ್ನಗಳ ಮೂಲಕ ವ್ಯವಹಾರ ನಡೆಸುವ ಏಜೆನ್ಸಿಗಳು, ಕುಶಲಕರ್ಮಿಗಳು, ನೇಕಾರರು, ಕರಕುಶಲಿಗಳು, ಸ್ವ-ಸಹಾಯ ಗುಂಪುಗಳು, ಬುಡಕಟ್ಟು ಸಹಕಾರ ಸಂಘಗಳು ಮತ್ತು ಸಮಾಜದ ಕಟ್ಟಕಡೆಯ ಹಾಗೂ ದುರ್ಬಲ ವರ್ಗಗಳಿಂದ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಾರಾಟದ ಅವಧಿ 15 ದಿನಗಳಾಗಿದ್ದು, ನಾಮ ಮಾತ್ರ ಶುಲ್ಕ 1,000 ರೂ. ಆಗಿರುತ್ತದೆ. ನಿರ್ದಿಷ್ಟ ನಿಲ್ದಾಣಕ್ಕೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಲ್ಲಿ, ಆದ್ಯತಾ ಪಟ್ಟಿಯ ಪ್ರಕಾರ ಅಥವಾ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು. ಪಟ್ಟಿಯಲ್ಲಿರುವ ಎಲ್ಲ ಅರ್ಜಿದಾರರು ಮುಗಿಯುವವರೆಗೆ ಇದನ್ನು ಮುಂದುವರಿಸಲಾಗುವುದು.

ಪ್ರಯಾಣಿಕರಿಗೆ ಸುಲಭವಾಗಿ ಪ್ರವೇಶ ಸಾಧ್ಯವಾಗುವ ಸ್ಥಳದಲ್ಲಿ ತಾತ್ಕಾಲಿಕ ಕ್ರಿಯಾತ್ಮಕ ಅಂಗಡಿಯನ್ನು ಭಾಗವಹಿಸುವವರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಭಾಗವಹಿಸುವವರು ಉತ್ಪನ್ನಗಳನ್ನು ನಿಲ್ದಾಣದಲ್ಲಿ ಮತ್ತು ಪ್ಲಾಟ್‌ಫಾರ್ಮ್ಗಳಲ್ಲಿ ಮಾರಾಟ ಮಾಡಬಹುದು.

ಪ್ರತೀ ನಿಲ್ದಾಣಕ್ಕೆ ಗುರುತಿಸಲಾದ ಉತ್ಪನ್ನಗಳ ಸಂಪೂರ್ಣ ವಿವರ https://www.swr.indianrailways.gov.inನಲ್ಲಿ ಲಭ್ಯವಿದೆ. ಅರ್ಜಿಗಳನ್ನು ಶೀಘ್ರದಲ್ಲೇ ಆಹ್ವಾನಿಸಲಾಗುವುದು ಮತ್ತು ದಿನಾಂಕವನ್ನು ಸೂಚಿಸಲಾಗುವುದು. ಆಸಕ್ತರು ಮೈಸೂರಿನಲ್ಲಿ ರೈಲ್ವೇಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರನ್ನು ಭೇಟಿ ಮಾಡಬಹುದು ಅಥವಾ 8884303801 ಸಂಪರ್ಕಿಸಬಹುದು ಎಂದು ಮೈಸೂರು ವಿಭಾಗದ ವಿಭಾಗೀಯ ವ್ಯವಸ್ಥಾಪಕ ರಾಹುಲ್‌ ಅಗರ್ವಾಲ್‌ ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.