ಬೆಂಗಳೂರು: ಆನ್‌ಲೈನ್ ಗೇಮ್ ನಿಷೇಧಿಸಲು ರಾಜ್ಯ ಸರ್ಕಾರ ಪೊಲೀಸ್ ಕಾಯ್ದೆ-1963ಕ್ಕೆ ತಿದ್ದುಪಡಿ ತಂದಿರುವ ಕ್ರಮ ಸಂವಿಧಾನ ಬದ್ಧವಾಗಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ರದ್ದುಪಡಿಸಿದೆ. ಆದರೆ ಈ ಕಾಯ್ದೆ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಕ್ರಮಬದ್ಧವಾಗಿ ಕಾಯ್ದೆ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ಮತ್ತು ಬೆಟ್ಟಿಂಗ್ ನಿಷೇಧಿಸುವ ಸಂಬಂಧ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಹೊಸ ಕಾಯಿದೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಉತ್ತಮ ಉದ್ದೇಶದಿಂದ ನಾವು ಆನ್ ಲೈನ್ ಗೇಮಿಂಗ್ ನಿರ್ಬಂಧಗಳ ಕಾಯ್ದೆ ತಂದಿದ್ದೆವು. ಆದರೆ ಈಗ ಕೋರ್ಟ್ ಕಾಯ್ದೆ ರದ್ದುಪಡಿಸಿದ್ದು, ಕೋರ್ಟ್ ನೀಡಿದ ಆದೇಶದ ಪ್ರತಿ ತರಿಸಿ ಪರಿಶೀಲನೆ ಮಾಡುತ್ತೇವೆ. ಕೋರ್ಟ್ ಯಾವುದರ ಬಗ್ಗೆ ಹೇಳಿದೆ, ಯಾವ ಕಲಂ ತೆಗೆಯಬಹುದು ಎಂದು ಪರಿಶೀಲಿಸಿ ಮತ್ತೆ ಕಾಯ್ದೆ ಜಾರಿಗೊಳಿಸುತ್ತೇವೆ. ಹೈಕೋರ್ಟ್ ಆದೇಶವನ್ನು ನಾವು ಒಪ್ಪುತ್ತೇವೆ. ಆದರೆ ಆನ್ ಲೈನ್ ಗೇಮ್ ಗೆ ಸಂಪೂರ್ಣವಾಗಿ ಅವಕಾಶ ಕೊಟ್ಟಿಲ್ಲ. ಹಣವಿಟ್ಟು ಆಡಲು ಅವಕಾಶ ನೀಡಿಲ್ಲ. ಎಲ್ಲಾ ಸಾಧ್ಯತೆಗಳ ಬಗ್ಗೆ ಮತ್ತೊಮ್ಮೆ ಕೂತು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಆನ್ ಲೈನ್ ಜೂಜು ರದ್ದುಪಡಿಸಲು ಕರ್ನಾಟಕ ಪೊಲೀಸ್ ಕಾಯ್ದೆ-1963ಕ್ಕೆ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿ ಕಾಯ್ದೆಯನ್ನು 2021ರ ಸೆಪ್ಟೆಂಬರ್‌ನಲ್ಲಿ ವಿಧಾನ ಮಂಡಲದಲ್ಲಿ ಅಂಗೀಕರಿಸಲಾಗಿತ್ತು. 2021ರ ಅಕ್ಟೋಬರ್ 4ರಂದು ರಾಜ್ಯಪಾಲರು ಅನುಮೋದನೆ ನೀಡಿದ್ದರು. ಅ.5ರಿಂದ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿತ್ತು. ರಾಜ್ಯದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್‌ಗೆ 3 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸಲು ತಿದ್ದುಪಡಿ ಕಾಯ್ದೆಯಲ್ಲಿ ಆವಕಾಶವಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 2021ರ ಡಿ.22ರಂದು ತೀರ್ಪು ಕಾಯ್ದಿರಿಸಿತ್ತು.
ಆನ್‌ಲೈನ್ ಗೇಮ್ ನಿಷೇಧಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಗ್ಯಾಲಕ್ಟಸ್ ಫನ್ವೇರ್ ಟೆಕ್ನಾಲಜೀಸ್ ಮತ್ತಿತರೆ ಕಂಪನಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ 12 ಅರ್ಜಿಗಳನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರ ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ಹಾಗೂ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನೀಡಿದೆ.
ಆನ್‌ಲೈನ್ ಗೇಮ್ ನಿಷೇಧಿಸಲು ರಾಜ್ಯ ಸರ್ಕಾರ ಪೊಲೀಸ್ ಕಾಯ್ದೆ-1963ಕ್ಕೆ ತಿದ್ದುಪಡಿ ತಂದಿರುವ ಕ್ರಮ ಸಂವಿಧಾನ ಬದ್ಧವಾಗಿಲ್ಲ. ಆದ್ದರಿಂದ ಕಾಯ್ದೆಯ ಸಂಬಂಧಪಟ್ಟ ತಿದ್ದುಪಡಿಯನ್ನು ರದ್ದುಪಡಿಸುತ್ತಿದ್ದೇವೆ. ಆದರೆ, ಆನ್‌ಲೈನ್ ಬೆಟ್ಟಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಹೊಸ ಕಾಯ್ದೆ ತರಲು ಸರ್ಕಾರ ಸ್ವತಂತ್ರವಾಗಿದ್ದು, ಈ ತೀರ್ಪು ಅದಕ್ಕೆ ಯಾವುದೇ ತಡೆ ಒಡ್ಡುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.