ಮಂಗಳೂರು: ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಒತ್ತಡ ಹೆಚ್ಚಾಗಿದೆ. ಸುಳ್ಯ ಜಾತ್ರೆಯಲ್ಲಿ ಈ ಮೊದಲು ಎಲ್ಲ ಧರ್ಮೀಯರಿಗೂ ವ್ಯಾಪಾರಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಅಂತಿಮವಾಗಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ಜ.9ರಿಂದ 12ರ ವರೆಗೆ ವರ್ಷಾವಧಿ ಜಾತ್ರೆ ನಡೆಯಲಿದೆ. ಜ.6ರಂದು ಜಾತ್ರೆಯ ಸಂತೆ ಮಳಿಗೆಗಳ ಏಲಂ ನಡೆಯಲಿದೆ. ಅಂಗಡಿಗಳ ಏಲಂಗೆ ಸಂಬಂಧಿಸಿ ಜ.3ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಧರ್ಮದವರಿಗೂ ಮುಕ್ತ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು.
ಆದರೆ ಇದನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ಹಿಂದೂ ಸಂಘಟನೆಗಳ ಒತ್ತಡದಿಂದ ಬುಧವಾರ ಸಂಜೆ ದಿಢೀರ್ ತುರ್ತು ಸಭೆ ನಡೆಸಲಾಗಿದ್ದು ಈ ವೇಳೆ ಹಿಂದೂ ಧರ್ಮದವರಿಗೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಜ.6ರಂದು ನಡೆಯಲಿರುವ ಏಲಂನಲ್ಲಿ ಹಿಂದೂ ಧರ್ಮದವರು ಮಾತ್ರ ಭಾಗವಹಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.