ನವ ದೆಹಲಿ : ಪಂಜಾಬ್ ನ ಮಾಜಿ ಸಿಎಂ ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯ ನಾಯಕ ಅಮರಿಂದರ್ ಸಿಂಗ್ ಇಂದು ಬಿಜೆಪಿಗೆ ಸೇರ್ಪಡೆಗೊಂಡು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ಬಿಜೆಪಿ ಪಕ್ಷಕ್ಕೆ ಸೇರುವ ಮೊದಲು, ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ.
ಬಿಜೆಪಿ ಮತ್ತು ಸುಖ್ದೇವ್ ಸಿಂಗ್ ಧಿಂದಾಸ ನೇತೃತ್ವದ ಶಿರೋಮಣಿ ಅಕಾಲಿ ದಳ ಪಕ್ಷದೊಂದಿಗಿನ ಮೈತ್ರಿ ಮೂಲಕ ಪಿಎಲ್‌ಸಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದಾಗ್ಯೂ, ಯಾವುದೇ ಅಭ್ಯರ್ಥಿಯು ಗೆಲ್ಲಲು ಸಾಧ್ಯವಾಗಲಿಲ್ಲ, ಅಲ್ಲದೆ ಸಿಂಗ್ ಅವರು ಪಟಿಯಾಲದಲ್ಲಿ ಸೋಲನ್ನು ಎದುರಿಸಬೇಕಾಯಿತು, ಇದನ್ನು ಸಿಂಗ್ ಅವರ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು. ಸಿಂಗ್ ಅವರ ಮಗ ರಾಣಿಂದರ್ ಸಿಂಗ್ ಮತ್ತು ಮಗಳು ಜೈ ಇಂದರ್ ಕೌರ್ ಕೂಡ ಅಮರಿಂದರ್ ಸಿಂಗ್ ಅವರೊಂದಿಗೆ ಬಿಜೆಪಿಗೆ ಸೇರಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿಂಗ್, ಮಾಜಿ ಪಟಿಯಾಲ ರಾಜವಂಶದವರಾಗಿದ್ದಾರೆ.
ರಾಷ್ಟ್ರೀಯ ಭದ್ರತೆಯ ವಿವಿಧ ವಿಷಯಗಳು, ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನ, ಭಯೋತ್ಪಾದನೆ ಮತ್ತು ಮುಂತಾದವುಗಳನ್ನು ಒಳಗೊಂಡಂತೆ ರಾಜ್ಯದ ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಸಕಾರಾತ್ಮಕ ಚರ್ಚೆ ನಡೆಯುತ್ತಿದೆ ಎಂದು ಅಮಿತ್ ಶಾ ಹೇಳಿರುವುದನ್ನು ಅಮರಿಂದರ್ ಸಿಂಗ್ ಸೆಪ್ಟೆಂಬರ್ 12 ರಂದು ಉಲ್ಲೇಖ ಮಾಡಿ ಹೇಳಿದ್ದರು.