ಬೆಂಗಳೂರು: ನೆಲಮಂಗಲ ಪಟ್ಟಣದಲ್ಲಿ ‘ಪೇಸಿಎಂ’ ಪೋಸ್ಟರ್ಗಳನ್ನು ಅಂಟಿಸುವಂತೆ ಕೆಲವರಿಗೆ ದೂರವಾಣಿ ಮೂಲಕ ಸೂಚಿಸಿದ ಆರೋಪದಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ಮೇಲೆ ಹೂಡಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಭಾರತೀಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಜೆ.ಎಸ್.ನಾರಾಯಣಗೌಡ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾನೂನು ಕೋಶದ ಅಧ್ಯಕ್ಷ ವಿ.ರಾಮಕೃಷ್ಣ ಅವರು ಆಡಳಿತರೂಢ ಬಿಜೆಪಿ ವಿರುದ್ಧ ಪೇಸಿಎಂ ಅಭಿಯಾನಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಆದೇಶ ನೀಡಿದ್ದಾರೆ.
ಆರೋಪಿಗಳು ಮೊಬೈಲ್ ಫೋನ್`ಗಳಲ್ಲಿ ಜನರಿಗೆ ಕರೆ ಮಾಡಿ ಪೋಸ್ಟರ್ ಗಳನ್ನು ಹಾಕುವಂತೆ ಸೂಚನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಮತ್ತು ಆಸ್ತಿ ವಿರೂಪ ತಡೆ ಕಾಯ್ದೆಯಡಿ ಅರ್ಜಿದಾರರು ಅಪರಾಧ ಎಸಗಿದ್ದಾರೆ ಎಂದು ಭಾವಿಸುವಂತಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಈ ಕಾಯಿದೆಗಳ ಅಡಿಯಲ್ಲಿ ಶಿಕ್ಷಾರ್ಹವಾದ ಯಾವುದೇ ಅಪರಾಧವನ್ನು ಅವರು ಮಾಡಿಲ್ಲ ಎಂದು ಪೀಠ ಹೇಳಿದೆ.