ಚಿತ್ರದುರ್ಗ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಪಕ್ಷದ ಪೇ ಸಿಎಂ ಅಭಿಯಾನವನ್ನು ಕೊಳಕು ರಾಜಕೀಯ ಎಂದು ಟೀಕಿಸಿದ್ದಾರೆ. ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಕೊಳಕು ರಾಜಕೀಯ ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ನಾಯಕರ ನೈತಿಕ ಅದಃಪತನವನ್ನ ಬಿಂಬಿಸುತ್ತದೆ ಎಂದರು. ಪೇ ಸಿಎಂ ಅಭಿಯಾನ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತಾ ಕಾಂಗ್ರೆಸ್ ಪಕ್ಷಕ್ಕೆ ಜನಪರ ಕಾಳಜಿ ಇಲ್ಲದೇ ಕೊಳಕು ರಾಜಕಾರಣ ಮಾಡಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ , ಕರ್ನಾಟಕದಲ್ಲಿ ಹೀಗಾಗಲೂ ಬಿಡುವುದಿಲ್ಲ ಎನ್ನುವ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ನಾಯಕರಿಗೆ ಏನಾದರೂ ಸಮಸ್ಯೆಯಿದ್ದರೆ ನೇರವಾಗಿ ಬಂದು ಮಾತನಾಡಿ, ದಾಖಲೆಗಳನ್ನು ನೀಡಿ ನಂತರ ತನಿಖೆಗೆ ಒತ್ತಾಯಿಸಿ ಎಂದು ಕೇಳಿದರು.
ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ 95 ರಿಂದ 100 ಸ್ಥಾನಗಳು ದೊರಕಬಹುದು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲಾ ಸಮೀಕ್ಷೆಗಳು ಒಂದೊಂದು ರೀತಿಯ ಸಂಖ್ಯೆಗಳನ್ನು ನೀಡುತ್ತವೆ. ನನಗೆ ಎಲ್ಲರಿಗಿಂತ ಹೆಚ್ಚಾಗಿ ಜನರ ನಾಡಿಮಿಡಿತ ತಿಳಿದಿದೆ. ನಾನು ಸುಮಾರು 30 -35 ವರ್ಷಗಳಿಂದ ರಾಜಕೀಯದಲ್ಲಿದ್ದು, ಮುಂದಿನ ವರ್ಷ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದರು.
ದೆಹಲಿಯಿಂದ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆಯ ತೀರ್ಮಾನ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ದೆಹಲಿಗೆ ಹೋಗಿ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ದೆಹಲಿಗೆ ಹೋದಾಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುತ್ತೇನೆ. ಅಲ್ಲಿ ಏನು ತಿರ್ಮಾನ ಮಾಡಲಾಗುತ್ತದೆ, ನೋಡೋಣ ಎಂದರು.