ಕಿನ್ನಿಗೋಳಿ :ಪಾದಚಾರಿ ಮಹಿಳೆಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಿನ್ನಿಗೋಳಿಯಲ್ಲಿ ಇಂದು ನಡೆದಿದೆ.
ಘಟನೆಯಲ್ಲಿ ಪಕ್ಷಿಕೆರೆಯ ಕೆಮ್ರಾಲ್ ಮನೋಲಿ ಬಲ್ಲೆ ನಿವಾಸಿ ಜಯಂತಿ ಶೆಟ್ಟಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿನ್ನಿಗೋಳಿಯಲ್ಲಿ ಇಂದು ವಾರದ ಸಂತೆಯ ದಿನವಾಗಿದ್ದು, ಮಹಿಳೆಯು ಕಿನ್ನಿಗೋಳಿ ಚರ್ಚ್ ಕಡೆಯಿಂದ ತರಕಾರಿ ಹಿಡಿದುಕೊಂಡು ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಬರುತ್ತಿರುವ ಸಂದರ್ಭ ಕಿನ್ನಿಗೋಳಿ ಕಡೆಯಿಂದ ಮೂರುಕಾವೇರಿ ಕಡೆಗೆ ಸಂಚರಿಸುತ್ತಿದ್ದ ಬ್ರೀಜಾ ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಅನತಿ ದೂರಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಇದ್ದು ಕಾರಿನಲ್ಲಿದ್ದವರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಅಂಗಡಿ ಮಾಲಿಕರಾದ ಅಲ್ವಿನ್, ಸ್ಯಾನೀ ಪಿಂಟೋ, ಶೈಲಾ ಸಿಕ್ವೇರಾ ಸಹಕರಿಸಿದ್ದಾರೆ.ಅಪಘಾತದ ದೃಶ್ಯಾವಳಿಯು ಸಮೀಪ ಶಾಪ್ ಒಂದರಲ್ಲಿ ಆಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.