ಸುಳ್ಯ: ಹಲವು ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆ ತಿಳಿದಿದ್ದೇವೆ. ಇದೀಗ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದ್ದು ಇದನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ರಾಜ್ಯಕ್ಕೆ ವಿಸ್ತರಿಸಲು ಯೋಜನೆ ರೂಪಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಸುಳ್ಯ ನಗರ ಪಂಚಾಯಿತಿಯ ಕಲ್ಚರ್ಪೆ ತ್ಯಾಜ್ಯ ನಿರ್ವಹಣಾ ಘಟಕದಲ್ಲಿಅಳವಡಿಸಲಾದ ಗ್ಯಾಸಿಫಿಕೇಶನ್ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ತ್ಯಾಜ್ಯ ಅತೀ ಹೆಚ್ಚು ಉತ್ಪಾದನೆಯಾಗುತ್ತದೆ. ಈ ರೀತಿ ಉತ್ಪಾದನೆಯಾದ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆ ಮತ್ತು ಸವಾಲಾಗಿದೆ. ಒಣ ಕಸದಿಂದ ವಿದ್ಯುತ್ ಉತ್ಪಾದಿಸುವುದು ಉತ್ತಮ ಬೆಳವಣಿಗೆ. ಯಾವ ರೀತಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಆದಷ್ಟು ಬೇಗ ಈ ಸಮೃಸ್ಯೆಗೆ ಮುಕ್ತಿ ಕಾಣಿ್ಸಲು ಇದು ಅತ್ಯಂತ ಸಹಾಯಕಾರಿ ಎಂದು ತಿಳಿಸಿದರು.
ಈ ರೀತಿಯ ಕೌಶಲ್ಯ ಬಹಳ ಅಗತ್ಯ ಇದೆ. ಪ್ಲಾಸ್ಟಿಕ್ ಸಮಸ್ಯೆ, ತ್ಯಾಜ್ಯ ನಿರ್ವಹಣೆ ಸಮಸ್ಯೆಯಾಗಿದ್ದು ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸುಳ್ಯ ನಗರ ಪಂಚಾಯಿತಿ ನಡೆಸಿದ ಪ್ರಯತ್ನ ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ ವಿ ತೀರ್ಥರಾಮ, ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾದ ಡಾ ಆರ್ ಕೆ ನಾಯರ್, ತಹಸೀಲ್ದಾರ್ ಅನಿತಾಲಕ್ಷ್ಮಿ, ಸುಳ್ಯ ನಗರ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ನಗರ ಪಂಚಾಯಿತಿ ಪ್ರತಿಪಕ್ಷ ನಾಯಕ ಬಾಲಕೃಷ್ಣ ಭಟ್, ಮುಖ್ಯಾಧಿಕಾರಿ ಎಂ ಎಚ್ ಸುಧಾಕರ ಉಪಸ್ಥಿತರಿದ್ದರು.