ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಣೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಜುಲೈ ತಿಂಗಳಿನಿಂದ ಹಬ್ಬಗಳು ಶುರುವಾಗಲಿದೆ. ಈ ಸಮಯದಲ್ಲಿ ಅಗತ್ಯತೆಗಳು, ಖರ್ಚುಗಳು ಜಾಸ್ತಿಯಾಗುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ ಅಂತ್ಯದವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ವಿಸ್ತರಿಸಲಾಗುವುದಾಗಿ ಹೇಳಿದ್ದಾರೆ. ಪ್ರತಿ ತಿಂಗಳು ಕುಟುಂಬದ ಪ್ರತಿ ಸದಸ್ಯರಿಗೂ 5 ಕೆಜಿ ಅಕ್ಕಿ ಅಥವಾ ಗೋಧಿ ಉಚಿತವಾಗಿ ನೀಡಲಾಗುವುದು. ಅಲ್ಲದೆ ಪ್ರತೀ ಕುಟುಂಬಕ್ಕೆ ೧ ಕೆಜಿ ಬೇಳೆ ಉಚಿತವಾಗಿ ನೀಡಲಾಗುವುದು. ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ ದೇಶದ 80 ಕೋಟಿ ಜನತೆಗೆ ಪ್ರಯೋಜನವಾಗಲಿದೆ ಎಂದರು.
ಇನ್ನು ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೆ ತರುವ ಯೋಜನೆಯಿದ್ದು, ಇದರಿಂದ ಪ್ರಮುಖವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವವರಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.
ಈ ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶದ ಬಡವರು, ನಿರ್ಗತಿಕರಿಗೆ ಆಹಾರ, ಅಗತ್ಯವಸ್ತು ಪೂರೈಕೆ ಮಾಡಲು ಸರಕಾರಕ್ಕೆ ಸಾಧ್ಯವಾಗಿದೆ ಅಂದರೆ ಅದರ ಸಂಪೂರ್ಣ ಕ್ರೆಡಿಟ್ ದೇಶದ ರೈತರು ಹಾಗೂ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಸಲ್ಲುತ್ತದೆ ಎಂದರು.