ಬೆಂಗಳೂರು: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೊನ್ನೆ ಮೊನ್ನೆ ತಾನೆ ಬೆಂಗಳೂರಿಗೆ ಬಂದು ಹೋಗಿದ್ದ ಮೋದಿ ಇಂದು ಬೆಳಗಾವಿ ನಗರಕ್ಕೆ ಆಗಮಿಸಿ ಭರ್ಜರಿ ರೋಡ್ ಶೋ ಮೂಲಕ ಮತಬೇಟೆ ಶುರುಮಾಡಿದ್ದಾರೆ.
ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಮೋದಿ ಬಳಿಕ ಹಲವು ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನಡೆಸಿದರು. ಬಳಿಕ ಮಧ್ಯಾಹ್ನ 2:35ರ ವೇಳೆಗೆ ಬೆಳಗಾವಿ ಪಿಟಿಎಸ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ, ನಂತರ ಕಾರನ್ನು ಏರಿ ಮತ ಭೇಟೆ ಆರಂಭಿಸಿದರು.
ಬೆಳಗಾವಿ ನಗರದಲ್ಲಿ ಭರ್ಜರಿ 10.7 ಕಿ.ಮೀ ಮತ ಪ್ರಚಾರ ನಡೆಸಿದರು. ಕಾರಿನಲ್ಲಿ ನಿಂತಿದ್ದ ಮೋದಿ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ಹೂ ಮಳೆ ಸುರಿಸುವ ಮೂಲಕ ಭವ್ಯವಾದ ಸ್ವಾಗತ ಕೋರಿದರು.
ಮೋದಿ ಸಂಚರಿಸುವ ರಸ್ತೆಗೆ ರಂಗೋಗಳಿಂದ ಚಿತ್ತಾರ ಬಿಡಿಸಲಾಗಿತ್ತು. ಅಲ್ಲದೆ ಹೆಣ್ಣು ಮಕ್ಕಳು ಕೇಸರಿ ಪೇಟಾ ಧರಿಸಿ ಪೂರ್ಣ ಕುಂಭ ಸ್ವಾಗತ ಕೋರಿದರು. ಈ ಹಿಂದೆ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ನಡೆಸಿದ ರೋಡ್ ಶೋ ಬಿಜೆಪಿಗೆ ನೆರವಾಗಿತ್ತು. ಇದೀಗ ಅದೇ ತಂತ್ರವನ್ನು ಮೋದಿ ರಾಜ್ಯದಲ್ಲೂ ಪ್ರಯೋಗಿಸುತ್ತಿದ್ದಾರೆ.