ವಾಣಿಜ್ಯ ಜಾಹಿರಾತು

ಮೂಡುಬಿದಿರೆ: ತಾಲೂಕಿನ ತೋಡಾರು ಗ್ರಾಮದಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಉಲ್ಬಣಿಸಿ ತೀವ್ರ ಸಮಸ್ಯೆಯಾಗಿರುವ ಬಗ್ಗೆ ಸ್ಥಳೀಯ ಪಶುಸಂಗೋಪನಾ ಇಲಾಖೆಗೆ ತಿಳಿಸಿದರೂ, ಸೂಕ್ತ ಸ್ಪಂದನೆ ಸಿಗದ ಕಾರಣ ಗ್ರಾಮದ ಯುವಕರೋರ್ವರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಸಮಸ್ಯೆ ವಿವರಿಸಿದ ಬಳಿಕ ಸ್ಥಳೀಯ ವೈದ್ಯರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಘಟನೆ ನಡೆದಿದೆ.

ತೋಡಾರು ಪರಿಸರದಲ್ಲಿ ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು, ಸುಮಾರು ಹತ್ತಕ್ಕೂ ಹೆಚ್ಚು ದನ, ಕರುಗಳು ಸಾವನ್ನಪ್ಪಿರುತ್ತವೆ. ಹಲವಾರು ದನಗಳು ರೋಗಕ್ಕೆ ತುತ್ತಾಗಿ ನರಳುತ್ತಿವೆ. ಈ ಸಂಬಂಧ ಗ್ರಾಮದ ಯುವಕರು ಹಲವಾರು ಬಾರಿ ಪಶು ವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ವಿವರಿಸಿದ್ದಾರೆ. ಆದರೆ ವೈದ್ಯರು ಇದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ. ಇದನ್ನು ಮನಗಂಡು ಸ್ಥಳೀಯ ಸಾಮಾಜಿಕ ಸಂಘಟನೆಯ ಸದಸ್ಯರೋರ್ವರು ಟ್ವಿಟ್ಟರ್ ಮೂಲಕ “ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ” ಅಧಿಕೃತ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ. ಕೂಡಲೇ ಇದಕ್ಕೆ ಸ್ಪಂದಿಸಿದ ಇಲಾಖೆಯು, ಮೂಡುಬಿದಿರೆ ತಾಲೂಕಿನ ಪ್ರಮುಖ ಪಶು ವೈದ್ಯರು ಮತ್ತು ಗ್ರಾಮಕ್ಕೆ ಸಂಬಂಧ ಪಟ್ಟ ವೈದ್ಯರಿಗೆ ಘಟನೆ ನಡೆದ ಸ್ಥಳದ ಮಾಹಿತಿ ಪಡೆಯಲು ಕಳುಹಿಸಿದ್ದಾರೆ. ಅದರಂತೆ ಮರುದಿನ ತಾಲೂಕಿನ ಮುಖ್ಯ ವೈದ್ಯರಲ್ಲದೆ, ಇನ್ನಿಬ್ಬರು ವೈದ್ಯರುಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಗ್ರಾಮಸ್ಥರು ಅವರನ್ನು ತರಾಟೆಗೆತ್ತಿಕೊಂಡ ಪ್ರಸಂಗವೂ ನಡೆದಿದೆ. ವೈದ್ಯರ ನಿರ್ಲಕ್ಷ್ಯ, ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಜಾನುವಾರುಗಳು ಸಾವನ್ನಪ್ಪುವಂತಾಯಿತು ಎಂದು ಗ್ರಾಮಸ್ಥರು ದೂರಿದ್ದಾರೆ.
ಬಳಿಕ ಪಶುವೈದ್ಯ ಇಲಾಖೆಯ ಅಧಿಕಾರಿಗಳು ಗ್ರಾಮದ ಜನರೊಂದಿಗೆ ಮಾತುಕತೆ ನಡೆಸಿ ಮುಂದಿನ ಎರಡು ವಾರದೊಳಗೆ ಮಾಹಿತಿ ಕಾರ್ಯಾಗಾರ ಮತ್ತು ದನಗಳ ಆರೋಗ್ಯ ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.ಸಾಮಾಜಿಕ ಜಾಲತಾಣಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡರೆ ಅದರಿಂದಾಗುವ ಪ್ರಯೋಜನಕ್ಕೆ ಈ ಘಟನೆಯೂ ಒಂದು ನಿದರ್ಶನವಾಗಿದೆ.

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಾಲು ಬಾಯಿ ರೋಗ ವ್ಯಾಪಿಸಿದ್ದು ಕೊರೊನಾ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಈ ಸಮಸ್ಯೆಯೂ ತಲೆದೋರಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೋನಾ ಕಾರಣದಿಂದಾಗಿ ಈ ವರ್ಷ ಕೇಂದ್ರ ಸರ್ಕಾರ ಹಿಂದಿನ ವರ್ಷದಂತೆ ಎಫ್ಎಂಡಿ ಲಸಿಕೆಗಳನ್ನು ನೀಡದಿರುವುದು ರೋಗ ಉಲ್ಬಣಕ್ಕೆ ಕಾರಣವೆನ್ನಲಾಗಿದೆ. ರೋಗ ನಿಯಂತ್ರಿಸಲು ಸರ್ಕಾರ ಪ್ರತೀ 6 ತಿಂಗಳುಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ನೀಡಲೇಕು. ಈ ಲಸಿಕೆಯು 180 ದಿನಗಳ ಕಾಲ ಜಾನುವಾರುಗಳನ್ನು ರಕ್ಷಣೆ ಮಾಡುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.