ಮಂಗಳೂರು: ಉಡುಪಿ ಕೃಷ್ಣ ಮಠದ ಜಾಗಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ನೀಡಿದ ಹೇಳಿಕೆ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಸಾಕಷ್ಟು ಮಂದಿ ಮಿಥುನ್ ರೈ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ್ದರು. ಅಂದರಂತೆ ರಕ್ಷಿತ್ ಶೆಟ್ಟಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದು ಅದಕ್ಕೆ ಮಿಥುನ್ ರೈ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಯುವ ಉದಯೋನ್ಮುಖ ನಟ ರಕ್ಷಿತ್ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡಬೇಡಿ, ಅವರು ನಮ್ಮ ತುಳುನಾಡಿನ ಹೆಮ್ಮೆ ಎಂದು ಮಿಥುನ್ ರೈ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮಿಥುನ್ ರೈ ನನ್ನ ಹೇಳಿಕೆಯು ಪೇಜಾವರ ಶ್ರೀಗಳ ಭಾಷಣದಿಂದ ಉಲ್ಲೇಖಿಸಲ್ಪಟ್ಟಿದೆಯೇ ಹೊರತು ಯಾವುದು ನನ್ನ ವೈಯಕ್ತಿಕ ಹೇಳಿಕೆಯಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ನಾನು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಷ್ಠಾವಂತ ಅನುಯಾಯಿ ಹಾಗೂ ಅವರ ಬೋಧನೆಗಳು ಮತ್ತು ಕೋಮು ಸೌಹಾರ್ದ ಸಿದ್ಧಾಂತಗಳನ್ನು ನನ್ನ ಕೊನೆಯ ಉಸಿರು ಇರುವವರೆಗೂ ಪಾಲಿಸುತ್ತೇನೆ. ನಾನು ಏನೇ ಮಾತನಾಡಿದರೂ ಅದು ಪೇಜಾವರ ಶ್ರೀಗಳ ಭಾಷಣದಿಂದ ಉಲ್ಲೇಖಿಸಲ್ಪಟ್ಟಿದೆಯೇ ಹೊರತು ಯಾವುದು ನನ್ನ ವೈಯಕ್ತಿಕ ಹೇಳಿಕೆಯಲ್ಲ ಏಕೆಂದರೆ ನಾನು ಇತಿಹಾಸಕಾರನಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿವೆ. ಇಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕೆ, ಬಿಜೆಪಿಯವರು ಸೃಷ್ಟಿಸಿದ ಇಂತಹ ವಿವಾದಗಳು ಕೇವಲ ರಾಜಕೀಯ ಗಿಮಿಕ್ ಆಗಿದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತಿದ್ದೆ. ರಕ್ಷಿತ್ ಶೆಟ್ಟಿ ಅವರ ಮಾತಿನಲ್ಲಿ ಸರಿ ಇರಬಹುದು, ಆದರೆ ನನ್ನ ದೃಷ್ಟಿಕೋನದಿಂದ ನಾನು ಕೂಡ ಸರಿ. ನಮ್ಮ ಗೌರವಾನ್ವಿತ ಶ್ರೀಗಳು ನಮಗೆ ಕಲಿಸಿದ೦ತೆಯೇ ನಾನು ಕೋಮು ಸೌಹಾರ್ದತೆಯನ್ನು ಬೋಧಿಸುತ್ತೇನೆ, ಏಕೆಂದರೆ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಅದರ ಅವಶ್ಯಕತೆಯಿದೆ. ನನ್ನ ಎಲ್ಲಾ ಅನುಯಾಯಿಗಳು ಈ ಗೊಂದಲ ಮತ್ತು ಸೃಷ್ಟಿಯಾದ ವಿವಾದವನ್ನು ಕೊನೆಗಾಣಿಸಬೇಕೆಂದು ನಾನು ತಮ್ಮಲ್ಲಿ ವಿನಂತಿಸುತ್ತೇನೆ. ಹಾಗೂ ನಮ್ಮ ಯುವ ಉದಯೋನ್ಮುಖ ನಟ ರಕ್ಷಿತ್ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡಬೇಡಿ, ಅವರು ನಮ್ಮ ತುಳುನಾಡಿನ ಹೆಮ್ಮೆ. ಏನೇ ಅಡಚಣೆ ಬಂದರು ಸಹ ತುಳುನಾಡಿನ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ ಎಂದು ಮಿಥುನ್ ರೈ ಬರೆದುಕೊಂಡಿದ್ದಾರೆ.
ಮಿಥುನ್ ರೈ ಹೇಳಿಕೆಯ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ರಕ್ಷಿತ್ ಶೆಟ್ಟಿ, ‘ದೇವಾಲಯಗಳ ನಗರಿ ಉಡುಪಿಗೆ ಸಾವಿರಕ್ಕೂ ಹೆಚ್ಚು ವರ್ಷದ ಬರೆದಿಟ್ಟಿರುವ ಇತಿಹಾಸ ಇದೆ. ನಿಮಗೆ ಈ ಬಗ್ಗೆ ಗೊತ್ತಿರದಿದ್ದರೇ ಏಕೆ ಸಾರ್ವಜನಿಕ ಸಮಾರಂಭಗಳಲ್ಲಿ ನಿಮ್ಮ ಅಜ್ಞಾನ ಪ್ರದರ್ಶಿಸುತ್ತೀರಿ?’ ಎಂದು ಕಿಡಿಕಾರಿದ್ದರು. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಪರ ವಿರೋಧದ ಚರ್ಚೆಗಳು ನಡೆದಿದ್ದವು. ಒಂದು ಗುಂಪು ಮಿಥುನ್ ರೈ ಪರವಾಗಿ ನಿಂತರೆ, ಮತ್ತೊಂದು ಗುಂಪು ರಕ್ಷಿತ್ ಶೆಟ್ಟಿ ವಿರುದ್ಧವಾಗಿ ನಿಂತಿತ್ತು. ಇದು ವಿವಾದದ ರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಮಿಥುನ್ ರೈ ಸೋಷಿಯಲ್ ಮೀಡಿಯಾ ಮೂಲಕ ಬರೆದುಕೊಂಡಿದ್ದಾರೆ.