ಮುಂಬೈ: ಸಣ್ಣ ಮತ್ತು ಮಧ್ಯಮ ರೈತರು ಹಾಗೂ ದುರ್ಬಲ ವರ್ಗಗಳಿಗೆ ಹೆಚ್ಚಿನ ಸಾಲ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಆದ್ಯತೆ ವಲಯದ ಸಾಲಗಳನ್ನು ನೀಡುವ ಕುರಿತ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
ಈ ಮಾರ್ಗಸೂಚಿಗಳಿಂದಾಗಿ ಇನ್ನು ಮುಂದೆ ಸ್ಟಾರ್ಟ್ ಅಪ್ ಗಳಿಗೆ ಬ್ಯಾಂಕ್ ಗಳು 50 ಕೋಟಿ ರೂಪಾಯಿಗಳ ವರೆಗೆ ಸಾಲ ನೀಡಬಹುದಾಗಿದೆ. ಅಲ್ಲದೇ ರೈತರು ಕೃಷಿಗೆ ಬೇಕಾದ ಪಂಪುಗಳಿಗಾಗಿ ಸೋಲಾರ‍್ ಪ್ಲ್ಯಾಂಟ್ ಗಳನ್ನು ಮತ್ತು ಸಂಕುಚಿತ ಜೀವಾನಿಲ ಪ್ಲ್ಯಾಂಟ್ ಗಳನ್ನು ನಿರ್ಮಿಸಲು ನೀಡುವ ಸಾಲಗಳನ್ನು ಆದ್ಯತೆಯ ವಲಯಕ್ಕೆ ಸೇರಿಸಲಾಗಿದೆ.
ಸಾಲ ನೀಡುವಿಕೆಯಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸಲು, ಆದ್ಯತೆ ವಲಯದ ಸಾಲಗಳನ್ನು ಕಡಿಮೆ ಪಡೆಯುತ್ತಿರುವ ಜಿಲ್ಲೆಗಳನ್ನು ಗುರುತಿಸಿ ಅವುಗಳಿಗೆ ಆದ್ಯತೆ ನೀಡಲಾಗುವುದು ಎಂದು ಆರ‍್ ಬಿ ಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹೊಸ ಮಾರ್ಗಸೂಚಿಗಳು ನವೀಕರಿಸಬಹುದಾದ ಶಕ್ತಿ ಮತ್ತು ಆರೋಗ್ಯ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಿವೆ. ನವೀಕರಿಸಬಹುದಾದ ಶಕ್ತಿ, ’ಆಯುಷ್ಮಾನ್ ಭಾರತ’ದ ಅಡಿಯ ಯೋಜನೆಗಳೂ ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳಿಗೆ ನೀಡಲಾಗುವ ಸಾಲಮಿತಿಯನ್ನು ದ್ವಿಗುಣಗೊಳಿಸಲಾಗಿದೆ.