ಚೆನ್ನೈ: ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರ ಸಂಹಿತೆ ನಿಗದಿಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಮದ್ರಾಸ್ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಡ್ರೆಸ್ ಕೋಡ್ ಕುರಿತ ವಿವಾದಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಕೆಲವು ಶಕ್ತಿಗಳು ಡ್ರೆಸ್ ಕೋಡ್‌ಗೆ ಸಂಬಂಧಿಸಿದಂತೆ ವಿವಾದಗಳನ್ನು ಹುಟ್ಟುಹಾಕಿವೆ . ಅದು ಭಾರತದಾದ್ಯಂತ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್ ‘ ರಾಷ್ಟ್ರ ಅಥವಾ ಧರ್ಮ ಇದರಲ್ಲಿ ಯಾವುದು ಅತೀ ಮುಖ್ಯ ಎಂದು ಪ್ರಶ್ನಿಸಿದೆ.
‘ ಇದು ನಿಜವಾಗಿಯೂ ಆಘಾತಕಾರಿಯಾಗಿದೆ. ಕೆಲವರು ‘ಹಿಜಾಬ್’ ಅಂತಾರೆ , ಕೆಲವರು ‘ಟೋಪಿ’ (ಕ್ಯಾಪ್) ಮತ್ತು ಇನ್ನೂ ಕೆಲವರು ಬೇರೆ ಇನ್ಯಾವುದೋ! ಇದು ಒಂದು ದೇಶವೇ ಅಥವಾ ಇದು ಧರ್ಮದಿಂದ ವಿಭಜನೆಯಾಗಿದೆಯೇ ? ನಿಜಕ್ಕೂ ಇದು ಆಶ್ಚರ್ಯಕರವಾಗಿದೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂಎನ್ ಭಂಡಾರಿ ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಭಾರತ ಜಾತ್ಯತೀತ ರಾಷ್ಟ್ರ ಎಂಬ ಅಂಶವನ್ನು ಒತ್ತಿ ಹೇಳಿದ ಎಸಿಜೆ, ಪ್ರಚಲಿತ ವಿದ್ಯಮಾನಗಳಿಂದ ಕಂಡು ಬರುತ್ತಿರುವುದು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದಾರೆ.
ಆಗಮ ಸಂಪ್ರದಾಯದಲ್ಲಿ ಯಾವುದು ಪ್ಯಾಂಟ್, ಧೋತಿ, ಶರ್ಟನ್ನು ಉಲ್ಲೇಖಿಸುತ್ತದೆ- ಕೋರ್ಟ್ ಪ್ರಶ್ನೆ
ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರ ಸಂಹಿತೆ ನಿಗದಿಪಡಿಸುವಂತೆ ಕೋರಿ ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಂನ ರಂಗರಾಜನ್ ನರಸಿಂಹನ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ಇಂದು ನಡೆದಿದೆ.
ಅರ್ಜಿಯಲ್ಲಿ, ಭಕ್ತಾದಿಗಳಿಗೆ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶಿಸಬೇಕು. ರಾಜ್ಯಾದ್ಯಂತ ದೇವಸ್ಥಾನಗಳಿಗೆ ಹಿಂದೂಯೇತರರು ಕಾಲಿಡುವುದನ್ನು ನಿಷೇಧಿಸಬೇಕು ಮತ್ತು ದೇವಾಲಯಗಳ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದರು.
ಡ್ರೆಸ್ ಕೋಡ್ ಅನ್ನು ಸೂಚಿಸುವ ಡಿಸ್ಪ್ಲೇ ಬೋರ್ಡ್‌ಗಳನ್ನು ಪ್ರಮುಖವಾಗಿ ಇರಿಸಬೇಕು ಎಂದು ಅವರು ಹೇಳಿದರು. ಇದಕ್ಕೆ ಪೀಠವು, ನಿರ್ದಿಷ್ಟ ಡ್ರೆಸ್ ಕೋಡ್ ಇಲ್ಲದಿರುವಾಗ, ಅದರ ಮೇಲೆ ಡಿಸ್‌ಪ್ಲೇ ಬೋರ್ಡ್‌ಗಳನ್ನು ಹಾಕುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಆಶ್ಚರ್ಯಪಟ್ಟಿತು.
ಅರ್ಜಿದಾರರು ಆದೇಶಕ್ಕಾಗಿ ಒತ್ತಾಯಿಸಿದಾಗ, ಅವರ ಪ್ರಾರ್ಥನೆಗೆ ಸಾಕ್ಷ್ಯವನ್ನು ನೀಡುವಂತೆ ಪೀಠವು ಸಲಹೆ ನೀಡಿತು. ಆಗಮದಲ್ಲಿ (ಆಚರಣೆ) ಯಾವ ಭಾಗವು ಪ್ಯಾಂಟ್, ಧೋತಿ ಮತ್ತು ಶರ್ಟ್‌ಗಳನ್ನು ಉಲ್ಲೇಖಿಸುತ್ತದೆ ಎಂದು ಅದು ಪ್ರಶ್ನಿಸಿದೆ.
ಅರ್ಜಿದಾರರ ಪಟ್ಟುಬಿಡದ ನಿಲುವಿನ ಬಗ್ಗೆ ಸಿಟ್ಟಿಗೆದ್ದ ಪೀಠವು, ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವುದನ್ನು ತಡೆಯುವ ಎಚ್ಚರಿಕೆಯನ್ನು ನೀಡಿತು ಮತ್ತು ಸೂಕ್ತ ಪದಗಳನ್ನು ಬಳಸಿ ಮತ್ತು ಜಗಳವಾಡುವುದನ್ನು ನಿಲ್ಲಿಸುವಂತೆ ಸೂಚಿಸಿತು. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಸಂಪ್ರದಾಯವನ್ನು ಅನುಸರಿಸುತ್ತಿದೆ ಮತ್ತು ಇತರ ಧರ್ಮದ ಸಂದರ್ಶಕರಿಗೆ ಕೊಡಿ ಮರ (ಧ್ವಜಸ್ತಂಭ) ವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತಮಿಳುನಾಡು ಅಡ್ವೊಕೇಟ್ ಜನರಲ್ ಆರ್ ಷಣ್ಮುಗಸುಂದರಂ ನ್ಯಾಯಾಲಯಕ್ಕೆ ತಿಳಿಸಿದರು.
ಅಂತಿಮವಾಗಿ, ಪೀಠವು ಅರ್ಜಿದಾರರಿಗೆ ಡ್ರೆಸ್ ಕೋಡ್‌ಗೆ ಸಂಬಂಧಿಸಿದ ವಿವರಣೆಗಳೊಂದಿಗೆ ಅಫಿಡವಿಟ್ ಸಲ್ಲಿಸಲು ಅವಕಾಶ ನೀಡಿತು.