ಮೂರು ವರ್ಷಗಳ ಹಿಂದೆ ತೆರೆಕಂಡ ‘ನ್ಯೂರಾನ್’ ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಮಂಜುನಾಥ್ ಅಲಿಯಾಸ್ ಸಂಜು ನನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮಾ ರಂಗದ ಹೆಸರನ್ನು ದುರುಪಯೋಗ ಪಡಿಸಿಕೊಂಡು ಲೊಕ್ಯಾಂಟು ಆ್ಯಪ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ನ್ಯೂರಾನ್’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಸಂಜು ಬಳಿಕ ಚಿತ್ರೋದ್ಯಮದಿಂದ ದೂರವಾಗಿ ಹೆಣ್ಣುಮಕ್ಕಳನ್ನು ದಂಧೆಗೆ ಇಳಿಸುವ ಕೆಲಸದಲ್ಲಿ ನಿರತನಾಗಿದ್ದ ಎಂದು ತಿಳಿದು ಬಂದಿದೆ.
ವಿಕಾಸ್ ಪುಷ್ಪಗಿರಿ ನಿರ್ದೇಶನದಲ್ಲಿ ಮೂಡಿ ಬಂದ ‘ನ್ಯೂರಾನ್’ ಸಿನಿಮಾ ಮಂಜುನಾಥ್ ಗೆ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ನೇಹಾ ಪಾಟೀಲ್, ಶಿಲ್ಪಾ ಶೆಟ್ಟಿ ಹಾಗೂ ವೈಷ್ಣವಿ ಮೆನನ್ ಮೂವರು ನಾಯಕಿಯರು ಈ ಸಿನಿಮಾದಲ್ಲಿ ನಟಿಸಿದ್ದರು. ಮಂಜುನಾಥ್ ಗೆ ಇದು ಮೊದಲ ಸಿನಿಮಾವಾದರೂ, ಸಾಕಷ್ಟು ಖರ್ಚು ಮಾಡಿ ಸಿನಿಮಾ ತಯಾರಿಸಿದ್ದರು ನಿರ್ಮಾಪಕರು.
ಈತನ ಮೂಲ ಹೆಸರು ಮಂಜುನಾಥ್ ಅಂತಿದ್ದರೂ ಸಿನಿಮಾಗಾಗಿ ಇವನು ಯುವ ಎಂದು ಹೆಸರು ಬದಲಾಯಿಸಿಕೊಂಡಿದ್ದ, ವೇಶ್ಯಾವಾಟಿಕೆಗಾಗಿ ಸಂಜು ಹಾಗೂ ಇತರ ಹೆಸರುಗಳನ್ನು ಇಟ್ಟುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಖಚಿತ ಮಾಹಿತಿಯ ಮೇರೆಗೆ ಸದ್ದಗುಂಟೆ ಪಾಳ್ಯ ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದು, ಇವರಲ್ಲಿ ಮಂಜುನಾಥ್ ಕೂಡ ಒಬ್ಬನಾಗಿದ್ದಾನೆ.